ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ೩೦ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಘಟಕಕ್ಕೆ ಕಂಪನಿಯು ೩೧೫ ಕೋಟಿ ಹೂಡಿಕೆ ಮಾಡಿದ್ದು, ೧೬ ಸಾವಿರ ಚದರ ಮೀಟರ್ ವಿಸ್ತೀರ್ಣದ ಉತ್ಪಾದನಾ ಘಟಕ ನಿರ್ಮಿಸಲಾಗಿದೆ.
೩೦ ಎಕರೆ ವಿಸ್ತೀರ್ಣದಲ್ಲಿ ೩೧೫ ಕೋಟಿ ಹೂಡಿಕೆ । ೧೮ ತಿಂಗಳಲ್ಲಿ ನಿರ್ಮಾಣ ಪೂರ್ಣ: ಸಚಿವ ಎಂ.ಬಿ.ಪಾಟೀಲ
ಕನ್ನಡಪ್ರಭ ವಾರ್ತೆ ಕೋಲಾರಜರ್ಮನಿ ಮೂಲದ ಜಾಗತಿಕ ಖ್ಯಾತಿಯ ಕ್ರೋನ್ಸ್ ಕಂಪನಿಯ ನೂತನ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಬುಧವಾರ ಚಾಲನೆ ನೀಡಿದರು.
ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ೩೦ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಘಟಕಕ್ಕೆ ಕಂಪನಿಯು ೩೧೫ ಕೋಟಿ ಹೂಡಿಕೆ ಮಾಡಿದ್ದು, ೧೬ ಸಾವಿರ ಚದರ ಮೀಟರ್ ವಿಸ್ತೀರ್ಣದ ಉತ್ಪಾದನಾ ಘಟಕ ನಿರ್ಮಿಸಲಾಗಿದೆ. ವಿಶೇಷವೆಂದರೆ ಕೇವಲ ೧೮ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಘಟಕ ಕಾರ್ಯಾರಂಭಿಸಿರುವುದು ಕೈಗಾರಿಕಾ ವಲಯದಲ್ಲಿ ಗಮನ ಸೆಳೆದಿದೆ.ಸಚಿವ ಎಂ.ಬಿ.ಪಾಟೀಲ ಮಾತನಾಡಿ, ೨೦೨೪ರ ಅಕ್ಟೋಬರ್‌ನಲ್ಲಿ ಕ್ರೋನ್ಸ್ ಕಂಪನಿ ಸಲ್ಲಿಸಿದ್ದ ಹೂಡಿಕೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿ ೩೦ ಎಕರೆ ಭೂಮಿ ಮಂಜೂರು ಮಾಡಿತ್ತು. ೨೦೨೫ರ ಫೆಬ್ರವರಿ ೨೦ರಂದು ತಾವೇ ಭೂಮಿಪೂಜೆ ನೆರವೇರಿಸಿದ್ದು, ಕೇವಲ ೧೮ ತಿಂಗಳಲ್ಲಿ ಭವ್ಯ ಉತ್ಪಾದನಾ ಘಟಕ ನಿರ್ಮಾಣವಾಗಿರುವುದು ಹೂಡಿಕೆದಾರರಿಗೆ ರಾಜ್ಯದ ಕೈಗಾರಿಕಾಸ್ನೇಹಿ ವಾತಾವರಣದ ಬಗ್ಗೆ ಉತ್ತಮ ಸಂದೇಶ ನೀಡಲಿದೆ ಎಂದರು.
ಘಟಕದಲ್ಲಿ ಸುಮಾರು ೪೦೦ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಭಾರತದ ಮಾರುಕಟ್ಟೆಗೆ ಅಗತ್ಯವಿರುವ ಅತ್ಯಾಧುನಿಕ ಎರ್ಗೋಬ್ಲಾಕ್ ಪ್ಯಾಕೇಜಿಂಗ್ ಹಾಗೂ ಬಾಟ್ಲಿಂಗ್ ಯಂತ್ರಗಳನ್ನು ಉತ್ಪಾದಿಸಲಾಗುವುದು. ಗಂಟೆಗೆ ಒಂದು ಲಕ್ಷ ಬಾಟಲಿಗಳನ್ನು ಉತ್ಪಾದಿಸುವ ಸಾಮರ್ಥ್ಯದ ಯಂತ್ರಗಳನ್ನೂ ಇಲ್ಲಿ ತಯಾರಿಸಲಾಗುವುದು ಎಂದು ಸಚಿವರು ತಿಳಿಸಿದರು.ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡಿ:
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೈಗಾರಿಕೆಗಾಗಿ ಭೂಮಿ ನೀಡಿರುವ ‘ಲ್ಯಾಂಡ್ ಲೂಸರ್ಸ್’ ಕುಟುಂಬಗಳ ಸದಸ್ಯರು, ರೈತರ ಮಕ್ಕಳು ಹಾಗೂ ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಅರ್ಹತೆಗೆ ಅನುಗುಣವಾಗಿ ಉತ್ತಮ ಹುದ್ದೆಗಳಲ್ಲಿಯೂ ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಜಿಲ್ಲೆಯ ರಸ್ತೆ, ಶಿಕ್ಷಣ, ಕುಡಿಯುವ ನೀರು ಹಾಗೂ ಕೃಷಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಬೇಕು ಎಂದರು.
ಕೈಗಾರಿಕಾ ಘಟಕದಿಂದ ಕೋಲಾರ ಜಿಲ್ಲೆಯಲ್ಲಿ ಹೊಸ ಆರ್ಥಿಕ ಹಾಗೂ ಸಾಮಾಜಿಕ ಅವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಇದು ಮಹತ್ವದ ಕೊಡುಗೆ ನೀಡಲಿದೆ ಎಂದು ಜನಪ್ರತಿನಿಧಿಗಳು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ಅನುಷಾ, ನಿಯೋಜಿತ ಜರ್ಮನ್ ಕಾನ್ಸುಲ್ ಜನರಲ್ ಡಾ.ಕ್ರಿಸ್ಟಾಫ್ ಡೋರ್ಸ್‌ಫೆಲ್ಟ್, ಕ್ರೋನ್ಸ್ ಕಂಪನಿಯ ಸಿಒಒ ರಾಲ್ಫ್ ಗೋಲ್ಡ್‌ಬ್ರನ್ನರ್, ವ್ಯವಸ್ಥಾಪಕ ನಿರ್ದೇಶಕ ಥಾಮಸ್ ವೂಲ್ಫರ್, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಸುರಾಜ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ವೇಮಗಲ್ ನರಸಾಪುರ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ ಇದ್ದರು.