ಬೆಳೆ ಹಾನಿ ಪರಿಹಾರ ವಿತರಣೆ ಅವ್ಯವಹಾರ: 3ನೇ ದಿನವೂ ರೈತರ ಪ್ರತಿಭಟನೆ

| Published : Feb 05 2024, 01:46 AM IST

ಬೆಳೆ ಹಾನಿ ಪರಿಹಾರ ವಿತರಣೆ ಅವ್ಯವಹಾರ: 3ನೇ ದಿನವೂ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆ ಪರಿಹಾರ ವಿತರಣೆಯಲ್ಲಿ ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿ ಯಾಗಿರುವವರನ್ನು ಬಂಧಿಸುವವರೆಗೂ ನಾವುಗಳು ಕದಲುವುದಿಲ್ಲ ಎಂದು ರೈತರು ಹಗಲು-ರಾತ್ರಿ ರೈತರ ಪ್ರತಿಭಟನೆಯನ್ನು ನಡೆಸಿ ಮೂರನೇ ದಿನವೂ ಮುಂದುವರಿಸಿದ್ದಾರೆ.

ತಾಲೂಕು ಕಚೇರಿ ಬಳಿ ರೈತರ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಎಂ.ಪಿ.ಕವಿರಾಜ್ ಭೇಟಿ

ಕನ್ನಡಪ್ರಭ ವಾರ್ತೆ, ಕಡೂರು

ಬೆಳೆ ಪರಿಹಾರ ವಿತರಣೆಯಲ್ಲಿ ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿ ಯಾಗಿರುವವರನ್ನು ಬಂಧಿಸುವವರೆಗೂ ನಾವುಗಳು ಕದಲುವುದಿಲ್ಲ ಎಂದು ರೈತರು ಹಗಲು-ರಾತ್ರಿ ಮುಂದುವರಿಸುತ್ತಿರುವ ರೈತರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ತಾಲೂಕು ಕಚೇರಿ ಮುಂಭಾಗದಲ್ಲಿ ರೈತರ ಬೇಡಿಕೆಗಳ ಬಗ್ಗೆ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭಾನುವಾರ ತಹಸೀಲ್ದಾರ್ ಎಂ.ಪಿ.ಕವಿರಾಜ್ ಭೇಟಿ ನೀಡಿ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿ ಪಾಲಾಕ್ಷಮೂರ್ತಿ ಅವರನ್ನು ಅಮಾನತ್ತು ಮಾಡಲಾಗಿದೆ. ಅಲ್ಲದೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ನೀಡಿದ ದೂರಿನ ಮೇಲೆ ಎಫ್‍ಐಆರ್ ದಾಖಲಾಗಿದ್ದು ಆತನನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ರೈತರು ಪ್ರತಿಭಟನೆ ಹಿಂಪಡೆಯಿರಿ ಎಂದು ರೈತರಿಗೆ ಮನವಿ ಮಾಡಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಾಸೂರು ರವಿ, ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಪ್ರದೀಪ್ ಮತ್ತಿತರ ರೈತ ಮುಖಂಡರು ತಹಸೀಲ್ದಾರ್ ಅವರ ಮನವಿ ತಿರಸ್ಕರಿಸಿ, ರೈತರ ಖಾತೆಗೆ ಹಣ ಪಾವತಿಸಬೇಕು ಮತ್ತು ಆರೋಪಿ ಪಾಲಾಕ್ಷಮೂರ್ತಿ ಅವರ ಜೊತೆ ಶಾಮೀಲಾಗಿರುವ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂಬ ಬೇಡಿಕೆ ಮುಂದಿಟ್ಟರು. ನಮ್ಮ ಈ ಬೇಡಿಕೆ ಈಡೇರುವ ತನಕ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.

ಈಗಾಗಲೇ 3 ದಿನಗಳಾಗಿದ್ದು ಮನೆಯತ್ತ ಹೋಗಿಲ್ಲ ಸೋಮವಾರ ನಮ್ಮ ಜೊತೆಗೆ ಜಾನುವಾರುಗಳನ್ನು ಸಹ ತಾಲೂಕು ಕಚೇರಿ ಮುಂದೆ ತಂದು ಇಲ್ಲೇ ಕಟ್ಟಿಕೊಳ್ಳುತ್ತೇವೆ. ತಾವು ಸಾಧ್ಯವಾದರೆ ಮೇವು, ನೀರು ನೀಡಿ ಎಂದರು.

ಪ್ರತಿಭಟನೆ ನಿರತ ರೈತರಿಗೆ 3 ದಿನಗಳಿಂದ ಒಂದು ಲೋಟ ನೀರು ಸಹ ನೀಡದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಅವರ ನೀರು, ತಿಂಡಿ ಬೇಡವೇ ಬೇಡ ನಮಗೆ ದಾನಿಗಳು ನೀಡುತ್ತಿರುವ ಆಹಾರ ಪದಾರ್ಥಗಳೇ ಸಾಕು ಎಂದರು.ತಾಲೂಕಿನ ಇತರೆ ಹೋಬಳಿಗಳಲ್ಲಿ ಇಂತಹ ಘಟನೆ ನಡೆದಿದ್ದರೆ ರೈತರು ಪ್ರತಿಭಟನಾ ಸ್ಥಳಕ್ಕೆ ಬಂದರೆ ಅವರ ಪರವಾಗಿಯೂ ಹೋರಾಟ ಮಾಡಿ ನ್ಯಾಯ ಕೊಡಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಪ್ರದೀಪ್,ನಾಗರಾಜ್, ಯಶವಂತ್ ಕಂಚಿ,,ನವೀನ್,ಅಜೇಯ್ ಉಪ್ಪಾರ್, ಚನ್ನಕೇಶವ, ಯತೀಶ್, ಪ್ರಭಾಕರ್, ಹೊನ್ನಪ್ಪ, ಶರತ್ ಮತ್ತು ರಾಜಪ್ಪ ಮತ್ತಿತರರು ಇದ್ದರು.4ಕೆಕೆಡಿಯು1.ಕಡೂರು ತಾಲೂಕು ಕಚೇರಿ ಮುಂದೆ ಕಲ್ಕೆರೆ ರೈತರು ಪ್ರತಿಭಟನೆ ಮುಂದುವರಿಸಿದರು.

4ಕೆಕೆಡಿಯು1ಎ.ಕಡೂರು ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರ್ರತಿಭಟನಾ ನಿರತ ರೈತರು ಅಡುಗೆ ಮಾಡಿದರು.