ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಬೆಳೆ ಹಾನಿ: ರೈತರಲ್ಲಿ ಆಂತಕ

| Published : Dec 09 2024, 12:45 AM IST

ಸಾರಾಂಶ

ನೀರಿನಲ್ಲಿ ಮುಳುಗಿರುವ ಬತ್ತದ ಮೆದೆಗಳು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಬಾರಿ ಮಲೆನಾಡಿನ ಬಹುಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಹಲವೆಡೆ ಹಳ್ಳಕೊಳ್ಳಗಳ ನೀರು ಸಾವಿರಾರು ಎಕರೆ ಕೃಷಿ ಭೂಮಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಈಗ ಸುರಿದಿರುವ ಅಕಾಲಿಕ ಮಳೆಯಿಂದಾಗಿ ಇನ್ನೇನು ಫಸಲಿನ ನಿರೀಕ್ಷೆಯಲ್ಲಿದ್ದ ನೂರಾರು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಮತ್ತು ಭತ್ತದ ಕೊಯ್ಲು ಮುಗಿಯುತ್ತಾ ಬಂದಿದ್ದು, ಮಳೆಯಿಂದ ಬಿಡುಗಡೆಯಾಗದೆ ಫಸಲನ್ನು ಉಳಿಸಿಕೊಳ್ಳಲು ರೈತರು ಕಷ್ಟಪಡುವಂತಾಗಿದೆ.

ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಗುರುವಾರದಿಂದ ತುಂತುರು ಮಳೆ ಆಗುತ್ತಿದೆ. ಮೊದಲೇ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿರುವ ಭತ್ತದ ಬೆಳೆಗಾರರಿಗೆ ಫಸಲು ಉಳಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.

ಮುಂಗಾರು ಮಳೆ ಸಂದರ್ಭ ಸುರಿದ ಧಾರಾಕಾರ ಮಳೆ ಹಾಗೂ ನಂತರ ಸುರಿದ ಅಕಾಲಿಕಾ ಮಳೆಯಿಂದ ಮೆಕ್ಕೆಜೋಳ ಹಾಗೂ ಭತ್ತ ಫಸಲು ಹಾನಿಯಾಗಿತ್ತು.

ಫಸಲು ಕೊಯ್ಲಿಗೆ ಬಂದಿದ್ದು, ಚಿಕ್ಕಪುಟ್ಟ ಬೆಳೆಗಾರರು ಕೊಯ್ಲು ಮುಗಿಸಿದ್ದಾರೆ. ಶಿವಮೊಗ್ಗ, ಸಾಗರ ಹೋಬಳಿ ಸೇರಿದಂತೆ ಎಲ್ಲೆಡೆ ಬೆಳೆಗಾರರು ಭತ್ತ ಮತ್ತು ಮೆಕ್ಕೆಜೋಳ ಕೊಯ್ಲು ಮಾಡುತ್ತಿದ್ದು, ಫಸಲನ್ನು ಒಣಗಿಸಲು ಸಾಧ್ಯವಿಲ್ಲದಂತಾಗಿದೆ.

ಬಿಸಿಲಿನಲ್ಲಿ ಮೆಕ್ಕೆಜೋಳ ಬೀಜ ಒಣಗಿದರೆ ಮಾತ್ರ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. ಇಲ್ಲದಿದ್ದರೆ ಮೆಕ್ಕೆಜೋಳವನ್ನು ಕೊಳ್ಳುವವರೆ ಇಲ್ಲದಂತಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಹುತೇಕ ರೈತರು ಭತ್ತದ ಬೆಳೆಯನ್ನು ಕೊಯ್ಲು ಮಾಡುತ್ತಿದ್ದು, ಮುಗಿಯುವ ಹಂತದಲ್ಲಿದೆ. ಇನ್ನೂ ಗದ್ದೆಗಳಲ್ಲಿ ಕಟಾವು ಮಾಡಿದ ಬೆಳೆ ಉಳಿದಿದ್ದರೆ, ಕೆಲವು ರೈತರು ಮನೆಯ ಎದುರಿನಲ್ಲಿ ತಂದು ಸಂಗ್ರಹಿಸಿದ್ದಾರೆ. ಮಳೆ ಸುರಿದರೆ ಗದ್ದೆಯಲ್ಲಿರುವ ಭತ್ತದ ಪೈರಿನ ಮೇಲೆ ನೀರು ಶೇಖರಣೆಗೊಂಡು ದೊಡ್ಡ ಮಟ್ಟದ ಹಾನಿ ಸಂಭವಿಸುವ ಭಯ ಕಾಡುತ್ತಿದೆ.

ಮೋಡದ ಮುನ್ಸೂಚನೆ ಸಿಕ್ಕಿದ ತಕ್ಷಣ ಕೆಲ ರೈತರಂತೂ ಸಿಕ್ಕಿದಷ್ಟು ಭತ್ತ ಸಿಗಲಿ ಎಂದು ಕೊಯ್ಲು ಮಾಡಿದ ಒಂದೇ ದಿನಕ್ಕೆ ಗದ್ದೆಯಲ್ಲೇ ಟಾರ್ಪಲ್ ಹಾಕಿ ಬಡಿದು ಭತ್ತವನ್ನು ಸಂಗ್ರಹಿಸಿದ್ದಾರೆ.

ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಭತ್ತ ಕೃಷಿಗೆ ಹಿನ್ನಡೆಯಾಗಿದೆ. ಪ್ರಕೃತಿ ವಿಕೋಪದಿಂದ ಭಾರೀ ಪ್ರಮಾಣದ ಬೆಳೆ ಹಾನಿಯಾಗಿತ್ತು. ಭೂಕುಸಿತದಿಂದ ಎಷ್ಟೋ ಗದ್ದೆಗಳು ಮುಚ್ಚಿಹೋಗಿದ್ದವು. ಈ ನಡುವೆಯೂ ಭತ್ತದ ಫಸಲು ಉತ್ತಮವಾಗಿದ್ದು, ಈಗ ಅಕಾಲಿಕ ಮಳೆ ಬೀಳುತ್ತಿರುವುದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ.

ತಾಳಗುಪ್ಪ ಹೋಬಳಿಯಾದ್ಯಂತ ಅಕಾಲಿಕವಾಗಿ ಮಳೆ ಸುರಿಯುತ್ತಿದ್ದು. ಭತ್ತ ಹಾಗೂ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋಬಳಿಯ ಎಂಟು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರ ಎಕರೆ ಭತ್ತದ ಬೇಸಾಯ ಮಾಡಲಾಗಿದ್ದು ಇಂಟಾನ್, ಅಭಿಲಾಷ್‌, ಸಾವಿರದೊಂದ, ಐಇಟಿ ತಳಿಯ ಭತ್ತದ ತೆನೆಗಳು ಹಂಪಾಗಿ ಕೊರಳು ಬಾಗಿದೆ. ಅದರಲ್ಲಿ ಬಿತ್ತನೆ ಮಾಡಲಾದ ಸುಮಾರು 3.5 ಸಾವಿರ ಎಕರೆ ಬಿತ್ತನೆ ಗದ್ದೆಯನ್ನು ಕೊಯ್ಲು ಮಾಡಲಾಗಿದೆ. ಕೊಯ್ದ ಬತ್ತದ ಮೆದೆಗಳು ಸುರಿಯುತ್ತಿರುವ ಮಳೆಯಲ್ಲಿ ಕೆಲವಡೆ ತೇಲಿಹೋಗಿದೆ. ಗದ್ದೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಹೆಚ್ಚಿವರು ಸಾಂಪ್ರದಾಯಿಕವಾಗಿ ಕತ್ತಿಯಿಂದ ಕೊಯ್ಯುವುದರ ಬದಲು ಕೋಯ್ಲು ಯಂತ್ರದಿಂದ ಕೊಯ್ಲು ಮಾಡಿದ್ದರಿಂದ ಭತ್ತ ಕೈಸೇರಿದ್ದರೂ ಹುಲ್ಲು ಸಂಪೂರ್ಣ ಹಾಳಾಗಿದೆ.