ಸಾರಾಂಶ
ಎಸ್.ಜಿ.ತೆಗ್ಗಿನಮನಿ ನರಗುಂದ
ಕೆಳ ಭಾಗದ ರೈತರ ಜಮೀನುಗಳಿಗೆ ಅನುಕೂಲವಾಗಲೆಂದು ಸರ್ಕಾರ ಬೆಣ್ಣೆ ಹಳ್ಳ ಮತ್ತು ಮಲಪ್ರಭಾ ನದಿಗೆ ನಿರ್ಮಿಸಿದ್ದ ಜಾಕವೆಲ್‌ನ ವೈರಿಂಗ್ ಕಳ್ಳತನವಾಗಿದ್ದರಿಂದ ರೈತರು, ತಮ್ಮ ಜಮೀನುಗಳಿಗೆ ನೀರು ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.ನೀರಾವರಿ ಕಾಲುವೆಯ 14 ನೇ ಹಂಚಿಕೆಯ ಹದಲಿ-ಗಂಗಾಪುರ ಮತ್ತು ಹದಲಿ-ಮುದುಗುಣಕಿ, ಭೈರನಹಟ್ಟಿ ಗ್ರಾಮದ ಕೆಳಭಾಗದ ಗ್ರಾಮದ ರೈತರ ಜಮೀನುಗಳಿಗೆ ಬೆಣ್ಣೆ ಹಳ್ಳದಿಂದ ಎರಡು ಏತ ನೀರಾವರಿ ಜಾಕವೆಲ್ ಮೂಲಕ ಕಳೆದ ಕೆಲ ವರ್ಷಗಳಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ₹ 3 ಲಕ್ಷ ಮೌಲ್ಯದ ವೈಂಡಿಂಗ್ ವೈರ್‌ಗಳು 2024ರ ಜೂನ್ 14 ಮತ್ತು 29ರಂದು ಕಳ್ಳತನವಾಗಿದ್ದರಿಂದ ನೀರು ಎತ್ತುವ ಯಂತ್ರಗಳು ಸ್ತಬ್ಧವಾಗಿದೆ.
ಪ್ರಕರಣ ದಾಖಲು: ನೀರು ಎತ್ತುವ ಯಂತ್ರಗಳ ವೈರಿಂಗ್ ಕಳ್ಳತನವಾಗಿದ್ದರ ಬಗ್ಗೆ ನೀರಾರಿ ಇಲಾಖೆಯ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜಾಕವೆಲ್ ಬಂದ್ ಆಗಿದ್ದರ ಪರಿಣಾಮ ಸಾವಿರಾರು ಎಕರೆ ಭೂಮಿಗೆ ನೀರಿಲ್ಲದೇ ಕೃಷಿ ಚಟುವಟಿಕೆಗೆ ಬಾರಿ ಹೊಡೆತ ಬಿದ್ದಿದೆ.ತಾಲೂಕಿನ ಗಂಗಾಪುರ ಮತ್ತು ಹದಲಿ ಗ್ರಾಮದ ಹದ್ದಿನ ಬೆಣ್ಣೆಹಳ್ಳಕ್ಕಿರುವ ಹದಲಿ-ಗಂಗಾಪುರ ಮತ್ತು ಹದಲಿ-ಮದಗುಣಕಿ, ಭೈರನಹಟ್ಟಿ ಗ್ರಾಮಗಳಿಗೆ ಏತನೀರಾವರಿ ಯೋಜನೆಯ ಎರಡು ಜಾಕ್‌ವೆಲ್‌ಗಳಲ್ಲಿನ 11ಕೆವಿ ವಿದ್ಯುತ್ ಸ್ಥಾವರದ ಟ್ರಾನ್ಸ್‌ಫಾರ್ಮರನ ತಾಮ್ರದ ವೈಂಡಿಂಗ್ ಕಳ್ಳತನವಾಗಿದ್ದರೂ ಈ ವರೆಗೆ ರಿಪೇರಿಯಾಗದ ಪರಿಣಾಮ ರೈತರು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳಿಗೆ ನೀರಿಲ್ಲದಂತಾಗಿದೆ. ಅಲ್ಪಸ್ವಲ್ಪ ಮಳೆಯಿಂದ ಭೂಮಿಯ ಮೇಲ್ಭಾಗದಲ್ಲಿ ಉಬ್ಬಲು ಹಸಿ ಮಾತ್ರ ಇದ್ದು, ಮೇಲ್ಮಟ್ಟದ ತೇವಾಂಶದಲ್ಲಿಯೇ ಗೋವಿನಜೋಳ, ಬಿಟಿ ಹತ್ತಿ, ಸೂರ್ಯಕಾಂತಿ, ಜೋಳ, ಕಡಲೆ ಬೆಳೆಗಳನ್ನು ಬೆಳೆಯಲಾಗಿದೆ. ಸದ್ಯ ತೇವಾಂಶ ಇಲ್ಲದೇ ನೀರು ಸಿಗದೇ ಬೆಳೆಗಳು ಒಣಗುತ್ತಿವೆ.
ಜಲಾಶಯ ಭರ್ತಿಯಾದರೂ ಜಮೀನಿಗೆ ನೀರಿಲ್ಲ:ಪ್ರಸಕ್ತ ವರ್ಷ ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿಯಾಗಿ ಮೇಲ್ಭಾಗದ ರೈತರ ಕಾಲುವೆಗೆ ನೀರು ಬರುತ್ತಿದೆ. ಆದರೆ ಕೆಳ ಭಾಗದ ರೈತರ ಜಮೀನುಗಳಿಗೆ ಹನಿ ನೀರು ಬರುತ್ತಿಲ್ಲ. ಕಳ್ಳತನದಿಂದ ಬಂದ್ ಆಗಿದ್ದ ಟ್ರಾನ್ಸ್ ಫಾರ್ಮರ್ 8 ತಿಂಗಳ ಗತಿಸಿದರೂ ರಿಪೇರಿಯಾಗಿಲ್ಲ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಹುಬ್ಬಳ್ಳಿ ಮೂಲದ ಗುತ್ತಿಗೆದಾರರಿಗೆ ಟೆಂಡರ್ ಆಗಿದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಾರೆ.ನೀರಾವರಿ ನಿಗಮದ ಅಧಿಕಾರಿಗಳು ಕೆಳಭಾಗದ ರೈತರಿಗೆ ಕಾಲುವೆ ಮೂಲಕ ನೀರು ಪೂರೈಕೆ ಮಾಡಿಲ್ಲ, ಸರ್ಕಾರ ಮತ್ತು ನೀರಾವರಿ ನಿಗಮದವರು ಬೆಳೆ ಹಾನಿ ಮಾಡಿಕೊಂಡ ರೈತರ ಪ್ರತಿ ಎಕರೆಗೆ 50 ಸಾವಿರ ನೀಡಬೇಕು ಎಂದು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದ್ದಾರೆ.
ಎರಡು ಜಾಕವೆಲ್ ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಟೆಂಡರ್ ಆಗಿದೆ, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ನೀರಾವರಿ ನಿಗಮದ ಅಧಿಕಾರಿ ಜಗದೀಶ ಕುರಿ ತಿಳಿಸಿದ್ದಾರೆ.