ಗರಿಗೆದರಿದ ಕೃಷಿ ಚಟುವಟಿಕೆ: ಕೂಲಿ ಕಾರ್ಮಿಕರ ಕೊರತೆ

| Published : Jun 09 2024, 01:30 AM IST

ಸಾರಾಂಶ

ಭತ್ತ ಕೃಷಿ ಕುಸಿತಗೊಂಡು 7000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆಯಲಾಗುತ್ತಿದೆ .ಸುಮಾರು ಶೇ.60ರಷ್ಟು ತೋಟಗಾರಿಕಾ ಬೆಳೆ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಕೃಷಿ ಇದ್ದ ಸ್ಥಳಗಳಲ್ಲಿ ಯಾಂತ್ರಿಕ ಕೃಷಿಯಾಗಿ ಬದಲಾಗಿದ್ದು ಸಾಂಪ್ರದಾಯಿಕ ಶೈಲಿಯ ಕೃಷಿ ಕಡಿಮೆಯಾಗಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ ಇದೀಗ ಮುಂಗಾರು ಚುರುಕುಗೊಂಡಿದ್ದು, ಕೃಷಿ ಕಾರ್ಯಗಳು ಚರುಕುಗೊಳ್ಳುತ್ತಿವೆ. ಭತ್ತ ಬಿತ್ತನೆ ಸೇರಿದಂತೆ ನಾಟಿ ಕಾರ್ಯಗಳಿಗೆ ಕೂಲಿ ಕಾರ್ಮಿಕರ ಕೊರತೆಯನ್ನು ಕೃಷಿಕರು ಎದುರಿಸುತ್ತಿದ್ದಾರೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ 7000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ಯೋಜನೆ ರೂಪಿಸಲಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ನಾಟಿ ಸೇರಿದಂತೆ ಕೂಲಿಯಾಳುಗಳ ಕೊರತೆ ಕಾಡುತ್ತಿದೆ.

ಗದ್ದೆಯಲ್ಲಿಯಲ್ಲಿ ನಾಟಿ, ಗೊಬ್ಬರ ಹಾಕಲು ಸೇರಿದಂತೆ ಇತರ ಕೃಷಿ ಕಾರ್ಯಗಳಿಗೆ ಸ್ಥಳೀಯ ಕೂಲಿಕಾರ್ಮಿಕರು ಉಮೇದು ತೋರುತ್ತಿಲ್ಲ. ಅದಕ್ಕಾಗಿ ಇಲ್ಲಿನ ಕೃಷಿಕರು ಕೃಷಿ ಕೆಲಸಗಳಿಗೆ ದೂರದ ಬಾಗಲಕೋಟೆ, ಬಿಜಾಪುರ ಹಾಗೂ ಒಡಿಶಾ ಸೇರಿದಂತೆ ವಿವಿಧೆಡೆಗಳಿಂದ ಕೂಲಿಕಾರ್ಮಿಕರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಬಾರಿ ರೈತರು ಭತ್ತ ಬಿತ್ತನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಹೀಗಾಗಿ ನಾಟಿ ಕೆಲಸಗಳಿಗೆ ಹೆಚ್ಚು ಕೂಲಿಯಾಳುಗಳು ಬೇಕಾಗುತ್ತಾರೆ. ಕೌಶಲ್ಯಯುತ ನೈಪುಣ್ಯತೆಯಿರುವ ಕೂಲಿಕಾರ್ಮಿಕರ ಕೊರತೆಯ ಕಾರಣ ಈ ಬಾರಿ ಕೃಷಿಕರು ವಾರ್ಷಿಕ ಒಂದೇ ಬಾರಿಗೆ ಭತ್ತ ಬೆಳೆ ಬೆಳೆಯಲು ನಿರ್ದರಿಸಿದ್ದಾರೆ.

ಹೆಚ್ಚಿದ ಕೂಲಿಯಾಳುಗಳ ವೇತನ: ಒಂದೆಡೆ ಕೂಲಿಯಾಳುಗಳ ಅಲಭ್ಯತೆಯಾದರೆ ಮತ್ತೊಂದು ಕಡೆ ಕೂಲಿಕಾರ್ಮಿಕರ ಕೂಲಿ ಹೆಚ್ಚಾಗಿದೆ. ನಿತ್ಯ ಕೂಲಿಗಾಗಲಿ 600 - 800 ರು.ವರೆಗೆ ದಿನಗೂಲಿ ನೀಡಬೇಕು. ಅದರಲ್ಲೂ ಕೃಷಿ ಋತುವಿನಲ್ಲಿ ಕೂಲಿಯಾಳುಗಳ ಲಭ್ಯತೆಯೆ ಕಡಿಮೆ. ಇದರಿಂದಾಗಿ ಕೃಷಿಕರು ಕೃಷಿ ಭೂಮಿಯನ್ನು ಹಡಿಲು ಬಿಡುವಂತಾಗಿದೆ. ಕೆಲವರು ಭತ್ತ ಕೃಷಿಯಿಂದ ವಿಮುಖರಾಗಿ ಅಡಕೆ, ಬಾಳೆ ಸೇರಿದಂತೆ ಕೊಕ್ಕೊ ಗಿಡಗಳನ್ನು ನೆಟ್ಟು ತೋಟಗಾರಿಕ ಬೆಳೆಗಳಿಗೆ ಒತ್ತು ನೀಡಿದ್ದಾರೆ.ಯಾಂತ್ರೀಕೃತ ಕೃಷಿ ಕಷ್ಟ: ಕಾರ್ಕಳ, ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಎತ್ತರ ಪ್ರದೇಶಗಳಲ್ಲಿ ಗದ್ದೆಗಳಿರುವ ಕಾರಣ ಟ್ರ್ಯಾಕ್ಟರ್‌ ಹಾಗೂ ಯಂತ್ರಗಳನ್ನು ಬಳಸಿ ಭತ್ತ ಕೃಷಿ ಮಾಡುವುದು ಕಷ್ಟ. ನಾಟಿ ವಾಹನಗಳು ಎತ್ತರದ ಪ್ರದೇಶಕ್ಕೆ ಹೋಗುವುದು ಕಷ್ಟ. ಭತ್ತ ಸಸಿ ನಾಟಿಗೆ ಸ್ಥಳೀಯ ಮಹಿಳೆಯರು ಸಿಗುತಿಲ್ಲ. ಅದಕ್ಕಾಗಿ ಸ್ಥಳೀಯ ಕೃಷಿಕರು ಉತ್ತರ ಕರ್ನಾಟಕದ ಕೂಲಿಯಾಳುಗಳನ್ನು ಅವಲಂಬಿಸಿದ್ದಾರೆ.

ಕೃಷಿಗೆ ಯುವಕರ ಹಿಂದೇಟು: ಕರಾವಳಿ ಭಾಗದಲ್ಲಿ ಕೃಷಿಯಲ್ಲಿ ತೊಡಗಲು ಯುವಕರು ಹಿಂದೇಟು ಹಾಕುತಿದ್ದಾರೆ. ಅದರಲ್ಲೂ ಯುವಸಮುದಾಯ ಓದು ಮುಗಿದ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಲಸೆಹೋಗುತಿದ್ದಾರೆ. 2024ರ ಮೇ ಅಂತ್ಯದವರೆಗಿನ ಮಾಹಿತಿ ಪ್ರಕಾರ ಕಾರ್ಕಳ ಹೆಬ್ರಿ ಅವಳಿ ತಾಲೂಕುಗಳಲ್ಲಿ ಭೌಗೋಳಿಕ ವಾಗಿ 107586 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಅವುಗಳಲ್ಲಿ ‌32800 ಹೆಕ್ಟೇರ್ ಅರಣ್ಯ ಭೂಮಿಯಿದ್ದು, 28227 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಯಿದೆ. 19677 ತೋಟಗಾರಿಕಾ ಬೆಳೆಯಿದೆ, ಅದರಲ್ಲಿ 8860 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ, 6600 ಹೆಕ್ಟೇರ್ ವಿಸ್ತೀರ್ಣ ತೆಂಗುಬೆಳೆ‌, 777 ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಲಾಗಿದೆ. 2000 ಹೆಕ್ಟೇರ್ ಪ್ರದೇಶಕ ರಬ್ಬರ್ ಬೆಳೆ ಬೆಳೆಯಲಾಗಿದೆ.

ಭತ್ತ ಕೃಷಿ ಕುಸಿತಗೊಂಡು 7000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆಯಲಾಗುತ್ತಿದೆ .ಸುಮಾರು ಶೇ.60ರಷ್ಟು ತೋಟಗಾರಿಕಾ ಬೆಳೆ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಕೃಷಿ ಇದ್ದ ಸ್ಥಳಗಳಲ್ಲಿ ಯಾಂತ್ರಿಕ ಕೃಷಿಯಾಗಿ ಬದಲಾಗಿದ್ದು ಸಾಂಪ್ರದಾಯಿಕ ಶೈಲಿಯ ಕೃಷಿ ಕಡಿಮೆಯಾಗಿದೆ.

ಆಧುನಿಕ ಯಂತ್ರೋಪಕರಣಗಳು ಇದ್ದರೂ ಎತ್ತರದ ಪ್ರದೇಶಗಳಲ್ಲಿ ವಾಹನಗಳು ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಹಡಿಲು ಭೂಮಿ ನಿರ್ಮಾಣ ಕೃಷಿಗೆ ಪೂರಕವಾಗುವುದಿಲ್ಲ. ಅದಕ್ಕಾಗಿ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಕೂಲಿಯಾಳುಗಳನ್ನು ಬಳಸಿಕೊಂಡು ಕೃಷಿ ಮಾಡಲೇಬೇಕು

- ಪ್ರಕಾಶ್ ನಾಯಕ್ ಕುರ್ಸುಕಟ್ಟೆ, ಹೆರ್ಮುಂಡೆ ಕೃಷಿಕರು