ಸಾರಾಂಶ
ಕೆಆರ್‌ಎಸ್ ಅಣೆಕಟ್ಟೆಯಿಂದ ಮೊದಲು ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ : ಕೆಆರ್‌ಎಸ್ ಅಣೆಕಟ್ಟೆಯಿಂದ ಮೊದಲು ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಕೆರೆಗೋಡಿನಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ನಂತರ ಜೂನ್ 8ರಿಂದ ನಾಲೆಗಳಿಗೆ ನೀರು ಬಿಡಲಾಗುವುದು. ಜಿಲ್ಲೆಯ ಕೊನೆ ಭಾಗದ ಬೆಳೆಗಳಿಗೂ ನೀರು ತಲುಪಿಸುವ ಉದ್ದೇಶದಿಂದ ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಸರ್ಕಾರ ನೀಡುತ್ತಿರುವ ಶಕ್ತಿ ಯೋಜನೆ, ಯುವನಿಧಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಸೇರಿ ಐದು ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ 5000 ರು. ಹಣ ತಲುಪುತ್ತಿದೆ ಎಂದರು.
ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಬೆಳೆವಿಮೆ ರೈತರಿಗೆ 1,700 ಕೋಟಿ ರು. ಪಾವತಿ:
ಬೆಳೆ ವಿಮೆ ಯೋಜನೆಯಡಿ ರೈತರಿಗೆ 1,700 ಕೋಟಿ ರು. ಪಾವತಿಸಲಾಗಿದೆ. ಈ ವರ್ಷ ಮುಂಗಾರು ಬೆಳೆಗೆ ಯಾವುದೇ ತೊಂದರೆ ಇಲ್ಲದಂತೆ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಪ್ರತಿ ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಕೊರತೆ ಇಲ್ಲದಂತೆ ಸೌಲಭ್ಯ ಹಾಗೂ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಮಂಡ್ಯ ಕೆರಗೋಡಿನಿಂದ ಕುಣಿಗಲ್ ಕಡೆ ಹೋಗುವ ರಸ್ತೆ ಹಾಗೂ ಚಿಕ್ಕಮಂಡ್ಯದ ಕಾರೆಮನೆ ಗೇಟ್ ಬಳಿ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಶ್ವ ವಿದ್ಯಾನಿಲಯವನ್ನು ಆದಷ್ಟು ಬೇಗ ಸ್ಥಾಪಿಸಲಾಗುವುದು. ಹೊಸ ಶುಗರ್ ಫ್ಯಾಕ್ಟರಿಯನ್ನು ಜಿಲ್ಲೆಯಲ್ಲಿ ನಿರ್ಮಿಸಲಾಗುವುದು ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಭಾಗದ 27,000 ಆಸ್ತಿಗಳಿಗೆ ಈ ಸ್ವತ್ತು ಮಾಡುವ ಕೆಲಸ ನಿರ್ವಹಿಸಿದ್ದಾರೆ. ಮೊದಲು ವರ್ಷಕ್ಕೆ 500 ರಿಂದ 1000 ಮಾತ್ರ ಮಾಡುತ್ತಿದ್ದರು. ಈಗ 27000 ಮಾಡಿರುವುದು ಉತ್ತಮ ಸಾಧನೆಯಾಗಿದೆ ಎಂದರು.
ಶಾಸಕ ಪಿ.ರವಿಕುಮಾರ್ ಮಂಡ್ಯದ ಕೇಂದ್ರ ಸ್ಥಾನದಲ್ಲಿದ್ದು ಜಿಲ್ಲೆಯ ಯುವಕರು, ಮಹಿಳೆಯರು, ಜನಸಾಮಾನ್ಯರ ಸಂಪರ್ಕದಲ್ಲಿದ್ದುಕೊಂಡು ಸರ್ಕಾರದ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ ಎಂದರು.
ಜನ ಸಾಮಾನ್ಯರು ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಸುವ ಅರ್ಜಿಗಳ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಬರೆದು ಸಲ್ಲಿಸಬೇಕು. ಯಾವುದಾದರೂ ಕಾನೂನು ಬಾಹಿರವಾಗುವ ಅರ್ಜಿ ಹೊರತುಪಡಿಸಿ ಉಳಿದಂತೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಒಂದು ತಿಂಗಳೊಳಗೆ ನಿಮ್ಮ ಸಮಸ್ಯೆ ಪರಿಹರಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ಕಳೆದ ಸಾಲಿನಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ನ್ಯಾಯಾಲಯದಲ್ಲಿದ್ದ ಸುಮಾರು 10,600 ಪ್ರಕರಣಗಳಲ್ಲಿ 1,300 ಪ್ರಕರಣ ಇತ್ಯರ್ಥ ಪಡಿಸಲಾಗಿದೆ ಎಂದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಕೆರಗೋಡಿನ ಪಂಚಲಿಂಗೇಶ್ವರ ಸಮುದಾಯ ಭವನದ ನಿರ್ಮಾಣವೂ ಬಹಳ ವರ್ಷಗಳಿಂದ ಅರ್ಧಕ್ಕೆ ನಿಂತಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು. ಜೊತೆಗೆ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಸರ್ಕಾರವು ಅನುದಾನ ನೀಡಲಿದೆ. ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದರು.
5 ಕೋಟಿ ರು. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿಗಾಗಿ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಕಾಮಗಾರಿ ಮಾಡಲಾಗುವುದು. ಬಸ್ ನಿಲ್ದಾಣವನ್ನು ಕಟ್ಟಲು ಸದ್ಯಕ್ಕೆ ಸ್ಥಳದ ಕೊರತೆ ಇದೆ. ಸ್ಥಳದ ಹುಡುಕಾಟ ನಡೆಯುತ್ತಿದೆ. ಸ್ಥಳ ನಿಗಧಿಯಾದ ತಕ್ಷಣ ಬಸ್ ನಿಲ್ದಾಣವನ್ನು ಕಟ್ಟಲಾಗುವುದು ಎಂದರು.
ವಸತಿರಹಿತರ ಅತೀ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ 50 ಸೈಟ್‌ಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ 5 ಎಕರೆ ಸರ್ಕಾರಿ ಜಾಗವನ್ನು ಹುಡುಕಿ ಕೆರಗೋಡು ಪಂಚಾಯ್ತಿಯಡಿಯಲ್ಲಿ ಬರುವ ವಸತಿ ಹಾಗೂ ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌ಗಳನ್ನು ನೀಡಲಾಗುವುದು ಎಂದರು.
ಈ ಹಿಂದೆ ಬಸರಾಳು ಮತ್ತು ಕೀಲಾರದಲ್ಲಿ ನಡೆದ ಜನಸ್ಪಂದನದಲ್ಲಿ ಬಂದ ಶೇ.95ರಷ್ಟು ಅರ್ಜಿಗಳನ್ನು ಕೇವಲ 1 ತಿಂಗಳೊಳಗೆ ವಿಲೇವಾರಿ ಮಾಡಲಾಗಿದೆ. ಹಾಗೆಯೇ ನೀವು ನೀಡಿರುವ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಎಸ್ಪಿ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.