ಬೆಳೆಗಾರರು ಟ್ರೇ ಸಸಿ ನಾಟಿಗೆ ಹೆಚ್ಚು ಒತ್ತು ನೀಡಬೇಕು: ತಂಬಾಕು ಮಂಡಳಿಯ ಕ್ಷೇತ್ರಾಧಿಕಾರಿ ಬಸವರಾಜು

| Published : May 09 2024, 01:07 AM IST

ಬೆಳೆಗಾರರು ಟ್ರೇ ಸಸಿ ನಾಟಿಗೆ ಹೆಚ್ಚು ಒತ್ತು ನೀಡಬೇಕು: ತಂಬಾಕು ಮಂಡಳಿಯ ಕ್ಷೇತ್ರಾಧಿಕಾರಿ ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಹೊಗೆಸೊಪ್ಪು ಬೆಳೆಗಾರರು ಟ್ರೇ ಸಸಿ ಮಡಿ ಬೆಳೆಸಲು ಹೆಚ್ಚು ಒತ್ತು ನೀಡುವ ಮೂಲಕ ಕರಿಕಡ್ಡಿ ಮತ್ತು ಬೇರುಗಂಟು ರೋಗಬಾಧಿತ ಗಿಡಗಳನ್ನು ಬೇರ್ಪಡಿಸಿ ನಾಟಿ ಮಾಡಬೇಕು ಎಂದು ರಾಮನಾಥಪುರ ತಂಬಾಕು ಮಂಡಳಿ ಕ್ಷೇತ್ರಾಧಿಕಾರಿ ಬಸವರಾಜು ಸಲಹೆ ನೀಡಿದರು. ಅರಕಲಗೂಡಿನ ತಂಬಾಕು ಬೆಳೆಗಾರರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ತರಬೇತಿ ಕಾರ್ಯಾಗಾರ । ತಂಬಾಕು ಬೆಳೆಗಾರರಿಗೆ ಐಟಿಸಿ ಆಯೋಜನೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ಹೊಗೆಸೊಪ್ಪು ಬೆಳೆಗಾರರು ಟ್ರೇ ಸಸಿ ಮಡಿ ಬೆಳೆಸಲು ಹೆಚ್ಚು ಒತ್ತು ನೀಡುವ ಮೂಲಕ ಕರಿಕಡ್ಡಿ ಮತ್ತು ಬೇರುಗಂಟು ರೋಗಬಾಧಿತ ಗಿಡಗಳನ್ನು ಬೇರ್ಪಡಿಸಿ ನಾಟಿ ಮಾಡಬೇಕು ಎಂದು ರಾಮನಾಥಪುರ ತಂಬಾಕು ಮಂಡಳಿ ಕ್ಷೇತ್ರಾಧಿಕಾರಿ ಬಸವರಾಜು ಸಲಹೆ ನೀಡಿದರು.

ತಾಲೂಕಿನ ಬೆಟ್ಟಸೋಗೆ ಗ್ರಾಮದಲ್ಲಿ ಇತ್ತೀಚೆಗೆ ತಂಬಾಕು ಮಂಡಳಿ ಮತ್ತು ಐಟಿಸಿ ಕಂಪನಿ ಸಹಯೋಗದಲ್ಲಿ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸಸಿ ಮಡಿಯಲ್ಲಿ ಗಿಡಗಳಿಗೆ ಎಲೆಗಳನ್ನು ಕ್ಲಿಪ್ ಮಾಡುವುದರಿಂದ ಬೆಳವಣಿಗೆ ಸದೃಢವಾಗಲಿವೆ. ಮುಖ್ಯ ಹೊಲದಲ್ಲಿ ನಾಟಿ ಮಾಡಿದ ಜಮೀನು ಸುತ್ತ ಜೋಳ ಇಲ್ಲವೇ ಸಜ್ಜೆಯನ್ನು ಬಾರ್ಡರ್ ಬೆಳೆಯಾಗಿ ಬೆಳೆದರೆ ಬಿಳಿ ನೊಣಗಳನ್ನು ಸಮರ್ಪಕವಾಗಿ ಹತೋಟಿಗೆ ತರಬಹುದು. ಈ ನೊಣಗಳು ತಂಬಾಕು ಮೋಸಾಯಿಕ್ ವೈರಸ್ ಅಥವಾ ಚೊಟರು ರೋಗ ಹರಡಲು ಕಾರಣವಾಗಿದ್ದು ನೊಣಗಳ ನಿಯಂತ್ರಣದಿಂದ ರೋಗ ಬಾಧೆಯನ್ನು ತಡೆಯಬಹುದು. ಅತಿಯಾದ ಅಮೋನಿಯಂ ಸಲ್ಫೇಟ್ ಬಳಸಿ ಭೂಮಿಯಲ್ಲಿ ಹುಳಿ ಅಂಶ ಹೆಚ್ಚಾಗಿದ್ದು ಅದನ್ನು ಸರಿಪಡಿಸಲು ಈ ವರ್ಷ ಕ್ಯಾಲ್ಸಿಯಮ್ ನೈಟ್ರೇಟ್ ಗೊಬ್ಬರವನ್ನು ನೀಡುತ್ತಿದ್ದು ಇದನ್ನು ಮೂಲ ಗೊಬ್ಬರವಾಗಿ ನಾಟಿ ಗಿಡಗಳ ಸಾಲಿನ ಎರಡು ಬದಿಗಳಲ್ಲಿ ಗುಳಿ ಮಾಡಿ ಡಾಲ್ಲೋಪ್ ವಿಧಾನದಲ್ಲೇ ಹಾಕಬೇಕು’ ಎಂದು ಮಾಹಿತಿ ನೀಡಿದರು.

ತಂಬಾಕು ಮಂಡಳಿಯ ಹರಾಜು ಅಧೀಕ್ಷಕಿ ಸವಿತಾ ಮಾತನಾಡಿ, ‘ಜಮೀನು ಬದುಗಳನ್ನು ಪಾಳು ಬಿಡದೆ ಕನಿಷ್ಠ ೧೦ ಅರಣ್ಯ ಸಸಿಗಳನ್ನು ನೆಡುವುದರಿಂದ ಪರಿಸರ ಸಂರಕ್ಷಣೆ ಜತೆಗೆ ತಂಬಾಕು ಹದಗಳಿಸಲು ಅಗತ್ಯವಾದ ಸೌದೆಗಳು ದೊರೆಯುತ್ತದೆ. ಎಲ್ಲ ರೈತರು ಮಣ್ಣಿನ ಫಲವತ್ತತೆ ಕಾಪಾಡಲು ಹಸಿರೆಲೆ ಗೊಬ್ಬರವನ್ನು ಬೆಳೆಸಿ ಹೂ ಬಿಡುವುದಕ್ಕಿಂತ ಮುಂಚೆ ಉಳುಮೆ ಮಾಡಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಕೂಡ ಕಾಪಾಡಬಹುದು. ಇದರಿಂದ ಇಳುವರಿ ಉತ್ತಮವಾಗಿ ಬರುತ್ತದೆ. ಲಾಭದಾಯಕವೂ ಆಗಿದೆ’ ಎಂದು ತಿಳಿಸಿದರು.

ಐಟಿಸಿ ಕಂಪನಿ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಜಮೀನಿನಲ್ಲಿ 100ರಿಂದ 60 ಸೆಂ.ಮೀ. ಅಂತರದಲ್ಲಿ ಹೊಗೆಸೊಪ್ಪು ಸಸಿಗಳನ್ನು ನಾಟಿ ಮಾಡುವುದರಿಂದ ಉತ್ತಮ ಗಾಳಿ ಮತ್ತು ಬೆಳಕು ಬೀಳಲು ಸಹಾಯವಾಗುತ್ತದೆ. ಇದರಿಂದ ಗಿಡಗಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಸಸಿ ಮಡಿ ತಯಾರಿಕೆ, ಸಸಿ ಮಡಿಗಳ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ, ರಾಸಾಯನಿಕ ಗೊಬ್ಬರ ಬಳಕೆ, ಸಸಿಗಳ ನಾಟಿ, ಅಂತರ ಬೇಸಾಯ ಕುರಿತು ತಂಬಾಕು ಬೆಳೆಯಲು ಅಗತ್ಯವಿರುವ ಸೂಕ್ತ ಸಲಹೆಗಳನ್ನು ನೀಡಲಾಯಿತು.

ಕಾರ್ಯಾಗಾರದಲ್ಲಿ ಅನೇಕ ರೈತರು, ಅಧಿಕಾರಿಗಳಾದ ಸವಿತಾ, ಮಂಜುನಾಥ್ ಹಾಗೂ ಇನ್ನಿತರರು ಹಾಜರಿದ್ದರು.