ಮಳೆ ಬೀಳದೆ ಒಣಗುತ್ತಿವೆ ಬೆಳೆ: ಬಿತ್ತನೆ ಕುಂಠಿತ

| Published : May 08 2025, 12:31 AM IST

ಮಳೆ ಬೀಳದೆ ಒಣಗುತ್ತಿವೆ ಬೆಳೆ: ಬಿತ್ತನೆ ಕುಂಠಿತ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ತಾಲೂಕಿನಲ್ಲಿ ಮಳೆ ಬೀಳದ ಹಿನ್ನೆಲೆಯಲ್ಲಿ ಏಪ್ರಿಲ್‌ ತಿಂಗಳಲ್ಲಿ ಫಸಲು ಕುಂಠಿತಗೊಂಡಿದೆ.

ರಂಗೂಪುರ ಶಿವಕುಮಾರ್

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಏಪ್ರಿಲ್‌ ತಿಂಗಳಲ್ಲಿ ಬಿದ್ದ ಮಳೆಗೆ ಬಿತ್ತನೆಯಾದ ಸೂರ್ಯಕಾಂತಿ, ಹತ್ತಿ, ಜೋಳದ ಫಸಲಿಗೆ ಸಾಕಷ್ಟು ಮಳೆ ಬೀಳದ ಕಾರಣ ಫಸಲು ಒಣಗುತ್ತಿದೆ. ನಾಲ್ಕೈದು ದಿನಗಳಲ್ಲಿ ಮಳೆಯಾಗಿದ್ದರೆ ಫಸಲು ಹಾನಿಯಾಗುತ್ತದೆ ಜೊತೆಗೆ ಬಿತ್ತನೆಯೂ ಕುಂಠಿತವಾಗಲಿದೆ.!

ಕಳೆದ ತಿಂಗಳ ಏಪ್ರಿಲ್‌ ತಿಂಗಳಲ್ಲಿ ವಾಡಿಕೆ ಮಳೆ ಶೇ.೭೨.೭ ಮಿಮಿ ಬೀಳಬೇಕಿತ್ತು. ಆದರೆ, ಶೇ.೬೭.೩ ಮಿಮಿ ಮಳೆ ಬಂದ ಕಾರಣ ತಾಲೂಕಿನಲ್ಲಿ ನಿಗದಿತ ಪ್ರಮಾಣದಲ್ಲಿ ಬಿತ್ತನೆ ಮಾಡಲು ಆಗಿಲ್ಲ. ಕೃಷಿ ಇಲಾಖೆ ಪ್ರಕಾರ ತಾಲೂಕಿನಲ್ಲಿ ವಿವಿಧ ಬೆಳೆ ಸೇರಿ ಸುಮಾರು ೩೩೪೦೦ ಹೆಕ್ಟೇರ್‌ನಷ್ಟು ಬಿತ್ತನೆಯಾಗಬೇಕಿತ್ತು, ಮಳೆ ಬೀಳದ ಕಾರಣ ಕಳೆದ ಏಪ್ರಿಲ್‌ ತಿಂಗಳಲ್ಲಿ ಕೇವಲ ೭೩೯೫ ಹೆಕ್ಟೇರ್‌ ನಷ್ಟು ಬಿತ್ತನೆಯಾಗಿದೆ. ಬಿತ್ತನೆಯ ಗುರಿ ಮುಟ್ಟಲು ಆಗಿಲ್ಲ.

ಸೂರ್ಯಕಾಂತಿ ೧೧೮೦೦ ಹೆಕ್ಟೇರ್‌ ಬಿತ್ತನೆಗೆ ೪೭೦೫ ಹೆಕ್ಟೇರ್‌ ಬಿತ್ತನೆಯಾಗಿದೆ, ಹತ್ತಿ ೫೯೧೦ ಹೆಕ್ಟೇರ್‌ಗೆ ೫೬೦ ಹೆಕ್ಟೇರ್‌ ಬಿತ್ತನೆಯಾದರೆ, ಜೋಳ ೮೫೦೦ ಹೆಕ್ಟೇರ್‌ಗೆ ೧೯೩೦ ಹೆಕ್ಟೇರ್‌ ಬಿತ್ತನೆಯಾಗಿದೆ. ಬಿತ್ತನೆ ಇನ್ನೂ ಅಂದಾಜು ೨೬ ಸಾವಿರ ಹೆಕ್ಟೇರ್‌ ಆಗಬೇಕಿದೆ. ಕಳೆದ ಏಪ್ರಿಲ್‌ ತಿಂಗಳಲ್ಲಿ ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆ ೭೬.೨ ಮಿಮಿ ಬದಲಿಗೆ ೮೫.೯ ಮಿಮಿ ಮಳೆ ಬಿದ್ದಿದೆ, ಬೇಗೂರು ಹೋಬಳಿಯಲ್ಲಿ ವಾಡಿಕೆ ಮಳೆ ೬೭.೩ ಮಿಮಿ ಬದಲಿಗೆ ೬೮.೩ ಮಿಮಿ ಬಂದಿದೆ. ತೆರಕಣಾಂಬಿ ಹೋಬಳಿಯಲ್ಲಿ ವಾಡಿಕೆ ಮಳೆ ೭೨.೨ ಮಿಮಿ ಬದಲಿಗೆ ೪೪ ಮಿಮಿ ಮಳೆ ಬಿದ್ದಿದೆ. ಹಂಗಳ ಹೋಬಳಿಯಲ್ಲಿ ವಾಡಿಕೆ ಮಳೆ ೭೫.೩ ಮಿಮಿ ಬದಲು ೭೧ ಮಿಮಿ ಮಳೆ ಬಿದ್ದಿತ್ತು.

ಮೇ ತಿಂಗಳಲ್ಲಿ ಸಾಕಷ್ಟು ಮಳೆ ಬೀಳುತ್ತದೆ. ಬಿತ್ತನೆ ಸಾಕಷ್ಟು ಆಗುತ್ತದೆ ಎಂದು ನಂಬಿದ್ದ ರೈತ ಕುಲಕ್ಕೆ ಮೇ ತಿಂಗಳ ಮೊದಲ ವಾರದಲ್ಲಿ ಕಸಬಾ ಹೋಬಳಿಯಲ್ಲಿ ೫.೨ ಮಿಮಿ ಮಳೆ, ಬೇಗೂರು ಹೋಬಳಿಯಲ್ಲಿ ೨೨ ಮಿಮಿ ಮಳೆ, ತೆರಕಣಾಂಬಿ ಹೋಬಳಿಯಲ್ಲಿ ೩.೬ ಮಿಮಿ ಮಳೆ, ಹಂಗಳ ಹೋಬಳಿಯಲ್ಲಿ ೯.೪ ಮಿಮಿ ಮಳೆ ಬಂದಿದೆ.

ಕಳೆದ ತಿಂಗಳು ಬಿತ್ತನೆಯಾದ ಫಸಲಿಗೆ ಮಳೆ ಸಾಕಾಗಿಲ್ಲ. ನೀರಿನ ಅಂಶವೇ ಭೂಮಿಯಲ್ಲಿ ಇಲ್ಲದ ಕಾರಣ ಫಸಲು ಒಣಗುತ್ತಿವೆ ಇದೇ ಪರಿಸ್ಥಿತಿ ಇನ್ನೂ ನಾಲ್ಕೈದು ದಿನ ಮುಂದುವರಿದರೆ ಫಸಲು ಹಾನಿಯಾಗುವುದು ಬಹುತೇಕ ಖಚಿತ. ಮೇ ತಿಂಗಳಲ್ಲಿ ಸಾಕಷ್ಟು ಮಳೆ ಬೀಳದ ಕಾರಣ ಏಪ್ರಿಲ್‌ ತಿಂಗಳಲ್ಲಾದ ಬೆಳೆ ಒಣಗುತ್ತಿವೆ. ಜೊತೆಗೆ ಉಳಿಕೆ ಬಿತ್ತನೆ ಮಾಡಲು ಆಗಿಲ್ಲ. ರೈತ ಆಕಾಶದತ್ತ ಮುಖ ಮಾಡುತ್ತ ಮಳೆ ಬೀಳೋದು ಯಾವಾಗ ಎಂದು ಕಾಯುತ್ತ ಕುಳಿತಿದ್ದಾನೆ.

ಪ್ರಸ್ತುತ ದಿನಗಳಲ್ಲಿ ಮಳೆ ತುಂಬಾ ಅವಶ್ಯಕ. ಏಪ್ರಿಲ್‌ ತಿಂಗಳಲ್ಲಾದ ಬಿತ್ತನೆಗೆ ಮಳೆ ಬೇಕಿದೆ. ಬಿತ್ತನೆ ಕೂಡ ಸಮರ್ಪಕವಾಗಿ ಆಗಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಮಳೆ ಬೀಳದೆ ಇದ್ದರೆ ಬಿತ್ತನೆಯಾದ ಫಸಲಿಗೆ ಹಾನಿಯಾಗಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಶಶಿಧರ್‌ ಹೇಳಿದ್ದಾರೆ.

ಮುನ್ಸೂಚನೆ ಇದೆ:

ಕೃಷಿ ವಿಜ್ಞಾನ ಕೇಂದ್ರ ಮೇ ೧೨ ರಿಂದ ೧೭ರ ವರೆಗೆ ಮಳೆಯಾಗುತ್ತದೆ ಎಂದು ಹೇಳಿದೆ. ಈಗ ಮಳೆ ಸಾಕಷ್ಟು ಬೇಕಿದೆ. ಬಿತ್ತನೆಯಾದ ಫಸಲಿಗೆ ಹಾಗೂ ಬಿತ್ತನೆ ಮಾಡಬೇಕಿರುವ ಕಾರಣ ಮಳೆ ಆಗಬೇಕಿದೆ ಎಂದರು.ಮೇ ತಿಂಗಳಲ್ಲಿ ವಾಡಿಕೆ ಮಳೆ ೧೧೬ ಮಿಮಿ ಬರಬೇಕು, ಮೇ ಮೊದಲ ವಾರದಲ್ಲಿ ೧೦ ಮಿಮಿ ಮಳೆ ಮಾತ್ರ ಬಿದ್ದಿದೆ. ನಾಲ್ಕೈದು ದಿನಗಳಲ್ಲಿ ಮಳೆ ಬೀಳದೆ ಹೋದರೆ ಖಂಡಿತ ಫಸಲಿಗೆ ಹಾನಿಯಾಗಲಿದೆ. ೩೩೪೦೦ ಹೆಕ್ಟೇರ್‌ ಬಿತ್ತನೆ ಆಗಬೇಕು. ಆದರೆ ಇಲ್ಲಿಯ ತನಕ ಕೇವಲ ೭೩೯೫ ಹೆಕ್ಟೇರ್‌ ಬಿತ್ತನೆ ಆಗಿದೆ.

-ಎಸ್.ಶಶಿಧರ್‌, ಎಡಿ, ಕೃಷಿ ಇಲಾಖೆ, ಗುಂಡ್ಲುಪೇಟೆ