ಸಾರಾಂಶ
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ:ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಯಾಗಿ 20 ದಿನ ಕಳೆದರೂ ಸಮರ್ಪಕ ಮಳೆಯಾಗದೆ ರೈತರಲ್ಲಿ ಆತಂಕ ಆವರಿಸಿದೆ.
ತಾಲೂಕಿನಲ್ಲಿ ಶೇ. 70ರಷ್ಟು ಈಗಾಗಲೆ ಬಿತ್ತನೆ ಪೂರ್ಣ ಆಗಿದೆ. ಕೆಲವೆಡೆ ಮೊಳಕೆ ಕಾಣುತ್ತಿವೆ. ಆದರೆ, ತೇವಾಂಶ ಕೊರತೆಯಿಂದ ಅವು ನೆಲ ಬಿಟ್ಟು ಮೇಲೇಳುತ್ತಿಲ್ಲ ಹಾಗೂ ಕೆಲ ಬೆಳೆಗಳು ಬಾಡಲು ಆರಂಭಿಸಿವೆ.ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ಉತ್ಸಾಹದಿಂದಲೇ ಬಿತ್ತನೆ ಮಾಡಿದ್ದ ರೈತರು ಇದೀಗ ಮಳೆಗಾಗಿ ಆಕಾಶದತ್ತ ಮುಖಮಾಡಿದ್ದಾರೆ. ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು ಮಳೆ ಬೀಳುತ್ತಿಲ್ಲ. ಒಣ ಗಾಳಿ ಬೀಸುತ್ತಿರುವುದರಿಂದ ಇರುವ ತೇವಾಂಶ ಕಡಿಮೆಯಾಗಿ ರೈತರು ಕಳವಳಪಡುವಂತಾಗಿದೆ. ಈ ಬಾರಿ ಮುಂಗಾರು ಮಳೆ ಚೆನ್ನಾಗಿದೆ ಎಂಬ ಭರವಸೆ ಮೇಲೆ ಬಿತ್ತನೆ ಮಾಡಿದ್ದೇವೆ. ಆದರೆ, ಮಳೆ ಇಲ್ಲದೆ ಮೊಳಕೆ ನೆಲ ಬಿಟ್ಟು ಮೇಲೆ ಬರುತ್ತಿಲ್ಲ. ಹೀಗೆ ಇನ್ನೆರಡು ದಿನ ಕಳೆದರೆ ಬಿತ್ತಿದ್ದೆಲ್ಲ ವ್ಯರ್ಥವಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ವಿದ್ಯುತ್ ವ್ಯತ್ಯಯ:ಮಳೆ ಕೊರತೆ ನಡುವೆ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸಿಗದೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಗಲು ತ್ರಿಫೇಸ್ ವಿದ್ಯುತ್ ಕೊಡುವುದನ್ನು ಬಿಟ್ಟು ರಾತ್ರಿ ಸಮಯದಲ್ಲಿ ಕೊಡುತ್ತಿದ್ದು ಅದು ಸಮರ್ಪಕವಾಗಿ ಕೊಡುತ್ತಿಲ್ಲ. ಹೀಗಾಗಿ ಹಗಲು ಹೊತ್ತಿನಲ್ಲಿ ವಿದ್ಯುತ್ ಸಂಪರ್ಕ ಕೊಟ್ಟರೆ ಅನುಕೂಲವಾಗಲಿದೆ ಎನ್ನುತ್ತಾರೆ ರೈತರು.
ನಮ್ಮಲ್ಲಿ ನೀರಾವರಿ ವ್ಯವಸ್ಥೆ ಇದೆ. ಹೀಗಾಗಿ ಮಳೆ ಕೊರತೆ ಎದುರಿಸಲು ಬೆಳೆಗಳಿಗೆ ನೀರು ಹಾಕಬೇಕೆಂದರೆ ಸರ್ಮಪಕ ವಿದ್ಯುತ್ ಸಿಗುತ್ತಿಲ್ಲ. ಜೆಸ್ಕಾಂನವರು ಹಗಲಿನ ಸಮಯದಲ್ಲಿ ವಿದ್ಯುತ್ ಕೊಟ್ಟರೆ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಒಂದಿಷ್ಟು ಅನುಕೂಲವಾಗುತ್ತದೆ ಎನ್ನುತ್ತಾರೆ ಬೋದೂರು ಗ್ರಾಮದ ರೈತ ಸಂಗಪ್ಪ.ನಾನು ಇಪ್ಪತ್ತು ಎಕರೆ ಜಮೀನಿನಲ್ಲಿ ತೊಗರಿ ಹಾಗೂ ಐದು ಎಕರೆ ಹೆಸರು ಬಿತ್ತನೆ ಮಾಡಿದ್ದು ₹ 50000ಕ್ಕೂ ಅಧಿಕ ಖರ್ಚು ಮಾಡಿದ್ದೇನೆ. ಬಿತ್ತನೆ ಮಾಡಿ ಒಂದು ತಿಂಗಳಾಗಿದ್ದು ಮಳೆಗಾಗಿ ಕಾಯುತ್ತಾ ಕುಳಿತಿದ್ದೇವೆ.
ಶರಣಪ್ಪ ಕುಷ್ಟಗಿಯ ರೈತಕುಷ್ಟಗಿ ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಶೇ. 70ರಷ್ಟು ಒಟ್ಟು 80034 ಹೆಕ್ಟೇರ್ ಸಾಧನೆಯಲ್ಲಿ 56,116 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮೂಲಕ ಗುರಿ ಸಾಧಿಸಲಾಗಿದೆ.
ರಾಜಶೇಖರ ತಾಂತ್ರಿಕ ಸಹಾಯಕ ಅಧಿಕಾರಿ ಕೃಷಿ ಇಲಾಖೆ ಕುಷ್ಟಗಿ