ಬಿತ್ತನೆ ಬೀಜ, ಕೂಲಿ, ಗೊಬ್ಬರ, ಬಾಡಿಗೆ ಹೀಗೆ ಸಾಕಷ್ಟು ಖರ್ಚು ಮಾಡಿರುವ ರೈತರು ತಲೆ ಮೇಲೆ ಕೈಹೊತ್ತು ಮುಗಿಲು ನೋಡುವಂತಾಗಿದೆ.
ಡಂಬಳ: ಹೋಬಳಿಯಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾಗಿದ್ದರಿಂದ ಬಿತ್ತಿದ ಬೆಳೆಗಳು ಬಾಡಿವೆ. ಹೀಗಾಗಿ ರೈತರು ಚಿಂತಾಕ್ರಾಂತರಾಗಿದ್ದಾರೆ. ವರುಣನ ಆಗಮನಕ್ಕೆ ಡಂಬಳ ಹೋಬಳಿಯ ಹಳ್ಳಿಗಳಲ್ಲಿ ಜನರು ಗುರ್ಜಿ ಆಚರಣೆ ಮೊರೆ ಹೋಗಿದ್ದಾರೆ.
ಪೂರ್ವ ಮುಂಗಾರು ಸುರಿದ ಮಳೆಗೆ ತಾಲೂಕಿನ ರೈತರು ಹೆಸರು, ಅಲಸಂದೆ, ಮೆಕ್ಕೆಜೋಳ, ತೊಗರಿ, ಎಳ್ಳು, ಸೂರ್ಯಕಾಂತಿ, ಹತ್ತಿ ಮತ್ತು ಈರುಳ್ಳಿ ಸೇರಿದಂತೆ ನಾನಾ ಬೆಳೆ ಬಿತ್ತನೆ ಮಾಡಿದ್ದರು. ಅವು ಈಗ ಮಳೆಯಿಲ್ಲದೆ ಸಂಪೂರ್ಣ ಬಾಡಿವೆ. ವಾರದಲ್ಲಿ ಮಳೆಯಾಗದೇ ಹೋದರೆ ಸಂಪೂರ್ಣ ಬೆಳೆ ಹರಗಬೇಕಾಗುತ್ತದೆ.ಬಿತ್ತನೆ ಬೀಜ, ಕೂಲಿ, ಗೊಬ್ಬರ, ಬಾಡಿಗೆ ಹೀಗೆ ಸಾಕಷ್ಟು ಖರ್ಚು ಮಾಡಿರುವ ರೈತರು ತಲೆ ಮೇಲೆ ಕೈಹೊತ್ತು ಮುಗಿಲು ನೋಡುವಂತಾಗಿದೆ. ಮಳೆ ನಂಬಿ ದುಬಾರಿಯಾಗಿರುವ ಬೀಜ, ಗೊಬ್ಬರಕ್ಕೆ ಬ್ಯಾಂಕ್ ಸಾಲ ಕೈಸಾಲ ಮಾಡಿ ಸಾಕಷ್ಟು ಖರ್ಚು ಮಾಡಿ, ಬಿತ್ತನೆಗೆ ಬಾಡಿಗೆ ನೀಡಿ, ಕಳೆ ತೆಗೆಯಲು ಕೂಲಿ ಕೊಟ್ಟು ರೈತ ಕಂಗಾಲಾಗಿದ್ದಾನೆ. ಇಂದಲ್ಲ ನಾಳೆ ಮಳೆ ಬರುತ್ತದೆ ಎನ್ನುವ ಭರವಸೆಯಲ್ಲೇ ರೈತರು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.ಮಳೆ ಕೈಕೊಟ್ಟಾಗ ಹಳ್ಳಿಗಳಲ್ಲಿ ಜನರು ಮಳೆಗಾಗಿ ನಾನಾ ರೀತಿಯ ಪೂಜೆ- ಪುನಸ್ಕಾರ ನಡೆಸುತ್ತಾರೆ. ವಾರಗಟ್ಟಲೆ ಗುರ್ಜಿ ಆಚರಿಸುವ ಜತೆಗೆ ಸಂಗ್ರಹಿಸಿದ ದವಸ ಧಾನ್ಯಗಳಿಂದ ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಪ್ರಸಾದ ತಯಾರಿಸಿ ಉಣ ಬಡಿಸುವುದರಿಂದ ಮಳೆ ಬರುತ್ತದೆ ಎನ್ನುವ ವಾಡಿಕೆ ಇದೆ.
ಡಂಬಳ, ಹೊಸೂರ ಡಂಬಳ ಸೇರಿದಂತೆ ವಿವಿಧ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳು ತಲೆ ಮೇಲೆ ಹೆಂಚು ಹೊತ್ತು, ಅದರ ಮೇಲೆ ಗೋವಿನ ಸಗಣಿಯಿಂದ ತಯಾರಿಸಿದ ಗುರ್ಜಿ ಇರಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಇದಕ್ಕೆ ಯುವಕರು, ರೈತರು,ರೈತ ಮಹಿಳೆಯರು ಸಾಥ್ ನೀಡಿದ್ದಾರೆ.ಬಿತ್ತಿದ ಬೆಳೆಗಳೆಲ್ಲ ಒಣಗಿ ಹೋಗುತ್ತಿವೆ. ಪೂರ್ವಜರ ಕಾಲದಿಂದಲೂ ಆಚರಣೆಯಲ್ಲಿರುವ ಗುರ್ಜಿ ಪೂಜೆ ಮಾಡಿದರೆ ಮಳೆ ಬರುತ್ತದೆ ಎನ್ನುವ ಭರವಸೆಯಿಂದ ಈ ಕಾರ್ಯ ಮಾಡಲಾಗಿದೆ. ಮಳೆದೇವನ ಆಗಮನಕ್ಕೆ ರೈತ ಸಮೂಹ ಕಾಯುತ್ತಿದೆ ಎಂದು ಡಂಬಳ ಗ್ರಾಮದ ರೈತರು ತಿಳಿಸಿದರು.
ಸರ್ಕಾರ ಗಮನ ಹರಿಸಲಿ: ವಿಪರೀತವಾದ ಗಾಳಿ ಬೀಸುತ್ತಿದ್ದು, ಉತ್ತಮ ಮಳೆಯಾಗದೆ ಆಗೊಂದು ಈಗೊಂದು ಹನಿಗಳು ಉದುರುತ್ತಿವೆ. ಇದರಿಂದ ಬಿತ್ತಿರುವ ಬೀಜ ಹುಟ್ಟುವುದಿಲ್ಲ ಮತ್ತು ಬೆಳೆದಿರುವ ಬೆಳೆಗಳು ಸರಿಯಾಗಿ ಮಳೆ ಇಲ್ಲದೆ ಬಾಡುತ್ತಿವೆ. ಸರ್ಕಾರಗಳು ಒಮ್ಮೆಯಾದರೂ ಬ್ಯಾಂಕ್ ಸಾಲ ಮನ್ನಾ ಮಾಡಿ ರೈತರಿಗೆ ಸಹಕಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ ಕರಮಡಿ ತಿಳಿಸಿದರು.