ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಕಾಗವಾಡ ಹಾಗೂ ಅಥಣಿ ಭಾಗಕ್ಕೆ ಸಂಪೂರ್ಣ ನೀರಾವರಿ ಕಲ್ಪಿಸಿ ಬರಮುಕ್ತ ಪ್ರದೇಶವನ್ನಾಗಿ ಮಾಡಲು ಇಬ್ಬರೂ ಶಾಸಕರು ಪಣ ತೊಟ್ಟಿದ್ದೇವೆ ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ಕಾಗವಾಡ ಮತಕ್ಷೇತ್ರದ ಅರಳಿಹಟ್ಟಿ ಗ್ರಾಮದಲ್ಲಿ ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿರುವುದಕ್ಕಾಗಿ ಅನಂತಪುರ ಹಾಗೂ ಮದಭಾವಿ ಜಿಪಂ ವ್ಯಾಪ್ತಿಯ ರೈತರು ಹಮ್ಮಿಕೊಂಡ ಸತ್ಕಾರ ಸಮಾರಂಭ ಹಾಗೂ ತುಂಬಿದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಅನೇಕ ವರ್ಷಗಳಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ಮತ್ತು ರೈತರ ಜಮೀನುಗಳಿಗೆ ನೀರಿಲ್ಲದೇ ಪರಡಾಡುವ ಸ್ಥಿತಿಯಲ್ಲಿದ್ದರು. ಆ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಈಗ ಬಸವೇಶ್ವರ ಏತ ನೀರಾವರಿ ಮೂಲಕ ಪ್ರಾಯೋಗಿಕವಾಗಿ ಕಾರ್ಯ ಪ್ರಾರಂಭ ಮಾಡಲಾಗಿದೆ. ಸದ್ಯ ಶೇ.60ರಷ್ಟು ಕಾರ್ಯ ಮುಗಿದಿದೆ. ಇನ್ನು ಕೇವಲ ಶೇ.40 ರಷ್ಟು ಕೆಲಸ ಮಾಡಬೇಕಿದೆ. ಅದನ್ನೂ ಶೀಘ್ರವಾಗಿ ಮುಗಿಸಿ ಈ ಪ್ರದೇಶವನ್ನು ಬರಗಾಲ ಮುಕ್ತ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಶಾಸಕ ರಾಜು ಕಾಗೆ ಮಾತನಾಡಿ, ಅನಂತಪೂರ ಹಾಗೂ ಮದಭಾವಿ ಭಾಗದಲ್ಲಿ ಸಾವಿರಾರು ಎಕರೆ ರೈತರ ಭೂಮಿಗೆ ನೀರಿಲ್ಲದೇ ಪರದಾಡುವ ಸ್ಥಿತಿ ಇತ್ತು. ಆ ಪರಿಸ್ಥಿತಿಯನ್ನು ಸದ್ಯದ ಮಟ್ಟಿಗೆ ಒಂದು ಹಂತಕ್ಕೆ ತಂದು ನಿಲ್ಲಿಸಿದ್ದೇವೆ. ಕೆಲವೇ ದಿನಗಳಲ್ಲಿ ಉಳಿದ ಎಲ್ಲ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಿ ಈ ಪ್ರದೇಶವನ್ನು ಹಸಿರು ಕ್ಷೇತ್ರವನ್ನಾಗಿ ಮಾಡಿ ರೈತರ ಆರ್ಥಿಕ ಸ್ಥಿತಿಯನ್ನು ಸದೃಡಗೊಳಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.ಈ ವೇಳೆ ಅರಳಿಹಟ್ಟಿ ಗ್ರಾಪಂ ಅಧ್ಯಕ್ಷ ಬಸನಗೌಡಾ ಪಾಟೀ(ಬಮ್ನಾಳ) ಮಾತನಾಡಿ, ಬಸವೇಶ್ವರ ಏತ ನೀರಾವರಿ ಯೋಜನೆ ಮೂಲಕ ನೀರನ್ನು ಒದಗಿಸಿ ಇಬ್ಬರೂ ಶಾಸಕರು ನಮ್ಮ ಪಾಲಿನ ಭಗೀರಥರು ಎನಿಸಿಕೊಂಡಿದ್ದಾರೆ. ಇದರಿಂದ ಅನೇಕ ರೈತಾಪಿ ವರ್ಗದವರಿಗೆ ಅನುಕೂಲ ಮಾಡಿಕೊಟ್ಟು ನುಡಿದಂತೆ ನಡೆದಿದ್ದಾರೆ. ಅಲ್ಲದೆ, ರೈತರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಬಡ್ಡಿ ರಹಿತ ಸಾಲ ನೀಡಿ ರೈತರ ಆರ್ಥಿಕ ಬಲವರ್ಧನೆಗೆ ಕಾರಣೀಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷ ಬಸನಗೌಡಾ ಪಾಟೀಲ್ (ಬಮ್ನಾಳ), ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ತಾನಾಜಿ ಶಿಂಧೆ, ಅಣ್ಣಾಸಾಬ ಮಿಸಾಳ, ನಿಜಗುಣಿ ಮಗದುಮ್, ಅಬ್ದುಲ್ ಮುಲ್ಲಾ, ಕೃಷ್ಣಾ ನಾಯಿಕ, ಆನಂದ ಜಾಧವ, ಜಾಲೇಂದ್ರ ಗಂಗಾಧರ, ಅಶೋಕ ಗಂಗಾಧರ, ಸಿದ್ದು ಅವಖೇಕರ, ಕೇದಾರಿ ನಾಗರಾಳೆ, ಗುಂಡಾ ಜಾಧವ್, ಮಂಜುಗೌಡ ಪಾಟೀಲ್, ಮಾಣಿಕ ಕದಂ ಸೇರಿದಂತೆ ಅನೇಕರು ಇದ್ದರು.ನಾವು ರಾಜಕೀಯ ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ನೀವು ಮಾಡಿದ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ನಿಮ್ಮ ಋಣ ಬಾರವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಿಕೊಳ್ಳುತ್ತಿದ್ದೇವೆ.
-ರಾಜು ಕಾಗೆ, ಶಾಸಕರು.