ಮಡಿಕೇರಿ ದಸರಾ ಜನೋತ್ಸವಕ್ಕೆ ಜನ ಸಾಗರ

| Published : Oct 13 2024, 01:05 AM IST

ಸಾರಾಂಶ

ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಶನಿವಾರ ಸಾವಿರಾರು ಮಂದಿ ಮಡಿಕೇರಿಗೆ ಆಗಮಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಶನಿವಾರ ಸಾವಿರಾರು ಮಂದಿ ಮಡಿಕೇರಿಗೆ ಆಗಮಿಸಿದರು.

ಶನಿವಾರ ಸಂಜೆಯಿಂದಲೇ ಸಾವಿರಾರು ವಾಹನಗಳು ಮಡಿಕೇರಿ ಕಡೆಗೆ ಆಗಮಿಸಿತು. ವಾಹನಗಳನ್ನು ಜನರಲ್ ತಿಮ್ಮಯ್ಯ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 9 ಗಂಟೆ ವೇಳೆಗೆ ಮಡಿಕೇರಿ ನಗರದ ರಸ್ತೆಗಳು ಜನರಿಂದಲೇ ಬಹುತೇಕ ಭರ್ತಿಯಾಗಿದ್ದವು. ನಗರದ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದಸರಾ ಹಿನ್ನೆಲೆಯಲ್ಲಿ ಮಂಜಿನ ನಗರಿ ಮಡಿಕೇರಿಯು ದೀಪಾಲಂಕಾರಗಳಿಂದ ಕಂಗೊಳಿಸಿತು. ಪ್ರವಾಸಿ ತಾಣ, ಸರ್ಕಾರಿ ಕಟ್ಟಡಗಳಲ್ಲಿ ಆಕರ್ಷಕ ಲೈಟಿಂಗ್ ಮಾಡಲಾಗಿತ್ತು.

ಮಡಿಕೇರಿಯ ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರದಲ್ಲಿ ಸಂಚರಿಸುವ ಮೂಲಕ ದಶ ಮಂಟಪಗಳ ಶೋಭಾಯಾತ್ರೆಗೆ ಚಾಲನೆ ದೊರಕಿತು. ಮೊದಲು ಪೇಟೆ ಶ್ರೀ ರಾಮ ಮಂದಿರ ದೇವಾಲಯದ ಮಂಟಪ ತೆರಳುವ‌ ಮೂಲಕ ಮಡಿಕೇರಿ ದಸರಾದ ದಶಮಂಟಪಗಳ ಶೋಭಾಯಾತ್ರೆ ಆರಂಭಗೊಂಡಿತು.

ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನಮಾರಿಯಮ್ಮ, ಕೋಟೆ ಮಹಾಗಣಪತಿ, ಕರವಲೆ ಭಗವತಿ, ಕಂಚಿ ಕಾಮಾಕ್ಷಿ, ದೇಚೂರು ಶ್ರೀ ರಾಮ ಮಂದಿರ, ಚೌಡೇಶ್ವರಿ, ಕೋದಂಡ ರಾಮ ದೇವಾಲಯದ ಮಂಟಪಗಳು ಶೋಭಾಯಾತ್ರೆ ಮೆರವಣಿಗೆ ನಡೆಸಿದವು.

ಪ್ರವಾಸಿ ತಾಣ ರಾಜಾಸೀಟು ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಶನಿವಾರ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಮಡಿಕೇರಿ ಕಡೆಗೆ ಆಮಿಸಿದ ಅಪಾರ ವಾಹನಗಳನ್ನು ಪೊಲೀಸರು ನಿಯಂತ್ರಿಸಿದರು. ದಸರಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಪೊಲೀಸರನ್ನು ಇಲಾಖೆಯಿಂದ ನಿಯೋಜಿಸಲಾಗಿತ್ತು.