ಸಾರಾಂಶ
ವೈಭವದ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಶುಕ್ರವಾರ ರಾತ್ರಿ ನಡೆದ ಕಾಶಿ ಮಾದರಿಯ ಗಂಗಾರತಿ ಗಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ವೈಭವದ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಶುಕ್ರವಾರ ರಾತ್ರಿ ನಡೆದ ಕಾಶಿ ಮಾದರಿಯ ಗಂಗಾರತಿ ಗಮನ ಸೆಳೆಯಿತು.ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ದುರ್ಗಾದೇವಿ ಹಾಗೂ ಗುರುಶಾಂತೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಗಂಗಾರತಿ ನೋಡಲು ಕಾಶಿಗೆ ಹೋಗುವ ಅವಶ್ಯಕತೆ ಇಲ್ಲ, ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಬಂದರೆ ಗಂಗಾರತಿ ನೋಡುವ ಸೌಭಾಗ್ಯ ದೊರೆಯುತ್ತದೆ. ನಾನು ಪ್ರತಿ ವರ್ಷ ದಸರಾ ಉತ್ಸವದಲ್ಲಿ ಭಾಗವಹಿಸುತ್ತೇನೆ. ಗಂಗಾರತಿ ನೋಡಿ ಎರಡು ಕಣ್ಣುಗಳು ತುಂಬಿದವು ಎಂದರು.
ಬಳಿಕ ಅವರು, ಕಾರಂಜಿಗೆ ವಿಶೇಷ ಪೂಜೆ ಸಲ್ಲಿಸಿ ಗುರುಶಾಂತೇಶ್ವರರ ರಥ ಎಳೆಯುವ ಮೂಲಕ ತಮ್ಮ ಭಕ್ತಿ ಅರ್ಪಿಸಿದರು.ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿರೇಮಠದಲ್ಲಿ ಪ್ರತಿ ವರ್ಷವೂ ದಸರಾ ಉತ್ಸವದಲ್ಲಿ ವಿಭಿನ್ನ ಕಾರ್ಯಕ್ರಮ ಜರುಗುತ್ತವೆ. ಇವತ್ತು ನವರಾತ್ರಿಯ ಕೊನೆಯ ದಿನ ಕಾರಂಜಿಗೆ ಗಂಗಾರತಿಯನ್ನು ಸದ್ಭಕ್ತರೆಲ್ಲರೂ ಸೇರಿ ಮಾಡಿದ್ದಾರೆ. ಎಲ್ಲರಿಗೂ ಒಳಿತಾಗಲಿ ಎಂದು ಆಶೀರ್ವದಿಸಿದರು.
ಗಂಗಾರತಿ ಕಾರ್ಯಕ್ರಮದಲ್ಲಿ ಪಿ.ಜಿ. ಹುಣಶ್ಯಾಳದ ನಿಜಗುಣ ಸ್ವಾಮೀಜಿ, ಗೋಕಾಕದ ಬ್ರಹ್ಮಾನಂದ ಸ್ವಾಮೀಜಿ, ವಿದ್ವಾನ್ ಸಂಪತ್ತಕುಮಾರ ಶಾಸ್ತ್ರಿ, ಮಹಾವೀರ ಬಾಗಿ, ಸುರೇಶ ಜಿನರಾಳೆ, ಚನ್ನಪ್ಪ ಗಜಬರ ಇತರರು ಇದ್ದರು.