ನಂದಿಬೆಟ್ಟದಲ್ಲಿ ಪ್ರವಾಸಿಗರ ದಂಡು, ಟ್ರಾಫಿಕ್ ಜಾಮ್

| Published : Oct 13 2024, 01:03 AM IST

ನಂದಿಬೆಟ್ಟದಲ್ಲಿ ಪ್ರವಾಸಿಗರ ದಂಡು, ಟ್ರಾಫಿಕ್ ಜಾಮ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಬೇಕು ಸೂರ್ಯೋದಯ ನೋಡಬೇಕು ಅಂತ ಕಾರು ಹಾಗೂ ಬೈಕ್‌ಗಳಲ್ಲಿ ಬಂದ ಪ್ರವಾಸಿಗರು ನಂದಿಬೆಟ್ಟದ ಕ್ರಾಸ್‌ನಲ್ಲಿಯೇ ಉಳಿಯುವಂತಾಯಿತು. ಕೆಲವರು ಚಿಕ್ಕಬಳ್ಳಾಪುರ ಅತ್ತ ನಂದಿಬೆಟ್ಟಕ್ಕೂ ಹೋಗಲಾಗದೇ ಇತ್ತ ವಾಪಾಸ್‌ ಬರಲಾಗದೇ ಗಂಟೆಗಟ್ಟಲೇ ರೋಡ್‌ನಲ್ಲಿಯೇ ಕಾಲ ಕಳೆಯುವಂತಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾಲು ಸಾಲು ರಜೆ ಹಿನ್ನೆಲೆ ಜನರು ಪ್ರವಾಸದ ಮೂಡ್‌ನಲ್ಲಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಹತ್ತಿರದಲ್ಲಿರುವ ಪ್ರವಾಸಿತಾಣಗಳಿಗೆ ಬೆಳ್ಳಂ ಬೆಳಗ್ಗೆ ಲಗ್ಗೆ ಇಡುತ್ತಿದ್ದಾರೆ. ಇನ್ನೂ ಬೆಂಗಳೂರಿಗೆ ಕೂಗಳತೆ ದೂರಲ್ಲಿರುವ ನಂದಿ ಗಿರಿಧಾಮಕ್ಕೆ ಶನಿವಾರ ಪ್ರವಾಸಿಗರ ದಂಡೇ ಹರಿದುಬಂದಿದೆ.

ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಬೇಕು ಸೂರ್ಯೋದಯ ನೋಡಬೇಕು ಅಂತ ಕಾರು ಹಾಗೂ ಬೈಕ್‌ಗಳಲ್ಲಿ ಬಂದ ಪ್ರವಾಸಿಗರು ನಂದಿಬೆಟ್ಟದ ಕ್ರಾಸ್‌ನಲ್ಲಿಯೇ ಉಳಿಯುವಂತಾಯಿತು. ಕೆಲವರು ಚಿಕ್ಕಬಳ್ಳಾಪುರ ಅತ್ತ ನಂದಿಬೆಟ್ಟಕ್ಕೂ ಹೋಗಲಾಗದೇ ಇತ್ತ ವಾಪಾಸ್‌ ಬರಲಾಗದೇ ಗಂಟೆಗಟ್ಟಲೇ ರೋಡ್‌ನಲ್ಲಿಯೇ ಕಾಲ ಕಳೆಯುವಂತಾಯಿತು. ಗಂಟೆಗಟ್ಟಲೇ ಕಾದು-ಕಾದು ಕೆಲವರು ನಂದಿಬೆಟ್ಟಕ್ಕೆ ಹೋದರೆ ಬಹುತೇಕರು ಅಯ್ಯೋ ಸಾಕಪ್ಪ ಸಾಕು ನಂದಿಬೆಟ್ಟದ ಸಹವಾಸ ಅಂತ ವಾಪಾಸ್ಸಾದರು.

ಬೆಂಗಳೂರು ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು ಬೆಳಗ್ಗೆ 5 ಗಂಟೆಯಿಂದಲೇ ಲಗ್ಗೆಯಿಟ್ಟಿದ್ದು ಬೆಳಗ್ಗೆ 6 ಗಂಟೆಗೆಯೇ ಪಾರ್ಕಿಂಗ್ ಫುಲ್ ಆಗಿತ್ತು. ಪ್ರವಾಸಿಗರು ಏಕಕಾಲದಲ್ಲಿ ಆಗಮಿಸಿದ ಹಿನ್ನೆಲೆ ಟಿಕೆಟ್ ಕೌಂಟರ್ ನಿಂದ ನಂದಿ ಸರ್ಕಲ್ ವರೆಗೂ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾಲುಗಟ್ಟಿ ನಿಂತ ವಾಹನಗಳು

ಕಾರು ಹಾಗೂ ಬೈಕ್‌ಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದರು. ಆದರೆ ನೀರಿಕ್ಷೆಗೂ ಮೀರಿ ನಂದಿಬೆಟ್ಟಕ್ಕೆ ಪ್ರವಾಸಿಗರು ಬಂದ ಕಾರಣ ನಂದಿಬೆಟ್ಟದ ಚೆಕ್ ಪೋಸ್ಟ್‌ನಿಂದ ನಂದಿಬೆಟ್ಟದ ಕ್ರಾಸ್, ಹೆಗಡಿಹಳ್ಳಿ, ಕಣಿವೆಪುರ ಗ್ರಾಮದವದರೆಗೂ ಕಿಲೋಮೀಟರ್ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಿ ಸೂರ್ಯೋದಯ ನೋಡಬೇಕು ಅಂತ ಬಂದ ಪ್ರವಾಸಿಗರಿಗೆ ನಿರಾಸೆಯಾಯಿತು. ನಂದಿಬೆಟ್ಟದ ಮೇಲ್ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ಕಾರಣ ಮೊದಲು ಬಂದ 300 ನಾಲ್ಕು ಚಕ್ರ ವಾಹನ ಹಾಗೂ 100 ಬೈಕ್‌ಗಳಿಗಷ್ಟೇ ನಂದಿಬೆಟ್ಟದ ಮೇಲ್ಭಾಗಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ. ಮೇಲಿಂದ ಒಂದು ವಾಹನ ವಾಪಾಸ್‌ ಬಂದರೆ ಮತ್ತೊಂದು ವಾಹನವನ್ನು ಮೇಲ್ಭಾಗಕ್ಕೆ ಬಿಡಲಾಗುತ್ತದೆ. ಹೀಗಾಗಿ ಸೀಮಿತ 300 ವಾಹನಗಳನ್ನು ಮೀರಿ ನೂರಾರು ಕಾರುಗಳ ಬಂದ ಕಾರಣ ನಿಂತಲ್ಲೇ ಕಾರುಗಳು ನಿಲ್ಲುವಂತಾಯಿತು.

ನಂದಿಗೆ ಪ್ರವಾಸಿಗರ ಭೇಟಿ ಹೆಚ್ಚಳ

ಈ ವರ್ಷ ಜನವರಿಂದ ಜೂನ್‌ವರೆಗೂ ಒಟ್ಟು 11,49,682 ಮಂದಿ ಭೇಟಿ ನೀಡಿದ್ದು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳ ಪ್ರಕಾರ ಈ ವರ್ಷಾಂತ್ಯಕ್ಕೆ ನಂದಿಗರಿಧಾಮಕ್ಕೆ ಪ್ರವಾಸಿಗರ ಭೇಟಿ 23 ಲಕ್ಷದಷ್ಟು ದಾಟುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರ ಜಿಲ್ಲೆ ಈಗ ಪ್ರವಾಸಿ ತಾಣಗಳ ಜಿಲ್ಲೆಯಾಗಿ ಮಾರ್ಪಟ್ಟಿದೆ. ನಂದಿಗಿರಿಧಾಮ, ನಂದಿ ಬೋಗನಂದೀಶ್ವರ, ಮುದ್ದೇನಹಳ್ಳಿ, ರಂಗಸ್ಥಳ, ಅವಲಬೆಟ್ಟ, ಗೌರಿಬಿದನೂರಿನ ವಿದುರಾಶ್ವತ್ಥ, ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಮತ್ತು ಸುರಸದ್ಮಗಿರಿ, ಬಾಗೇಪಲ್ಲಿಯ ಗುಮ್ಮನಾಯಕನಪಾಳ್ಯ,ಗಡಿದಂ, ಎಲ್ಲೋಡು, ಚಿಂತಾಮಣಿಯ ಮುರಗಮಲೆ ದರ್ಗಾ, ಕೈವಾರ ಮತ್ತಿತರ ಪ್ರವಾಸಿ ತಾಣಗಳಿಗೆ 2023 ರಲ್ಲಿ ಒಟ್ಟು 60.31 ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವರ್ಷ 2024 ರಲ್ಲಿ ಜನವರಿಯಿಂದ ಜೂನ್‌ ವರೆಗೂ 38.42 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ವರ್ಷಾಂತ್ಯಕ್ಕೆ 70 ಲಕ್ಷ ಪ್ರವಾಸಿಗರು ಭೇಟಿ ನೀಡುವ ಸಾದ್ಯತೆ ಇದೆ ಎನ್ನಲಾಗಿದೆ.