ಕೈಗಾರಿಕಾ ಭದ್ರತಾ ಪಡೆಯಲ್ಲಿ ಅಂಧಾದುಂಧಿ..!

| Published : Oct 13 2024, 01:03 AM IST

ಸಾರಾಂಶ

ನಾಲ್ಕೈದು ವರ್ಷ ಒಂದೆಡೆ ಕೆಲಸ ಮಾಡಿ ಬಳಿಕ ವರ್ಗಾವಣೆಯಾಗಿ ಹೋದ ಸಿಬ್ಬಂದಿ ಮರಳಿ ತಾನಿದ್ದ ಜಾಗೆಗೆ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಇಲ್ಲಿನ ಸಿಬ್ಬಂದಿ ಎಲ್ಲವೂ ದುಡ್ಡಿನ ಮಹಿಮೆ ಎಂದು ಹೇಳುತ್ತಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಇಲ್ಲಿ ವರ್ಗಾವಣೆಯಾದರೂ ತಿಂಗಳೊಳಗೆ ಮರಳಿ ಇದ್ದ ಜಾಗೆಗೆ ಮರು ವರ್ಗಾವಣೆ ಮಾಡಿಸಿಕೊಳ್ಳಬಹುದು. ಆದರೆ ಇದಕ್ಕೆ ಕೊಂಚ ದುಡ್ಡು ಖರ್ಚು ಮಾಡಬೇಕಷ್ಟೇ..!

ಇದು ಗೃಹ ಇಲಾಖೆಯ ಆಂತರಿಕ ವಿಭಾಗದಡಿ ಬರುವ ಧಾರವಾಡ ಕೈಗಾರಿಕಾ ಭದ್ರತಾ ಪಡೆಯಲ್ಲಿನ ಕರಾಮತ್ತು.

ಧಾರವಾಡ ಕೈಗಾರಿಕಾ ಭದ್ರತಾ ಪಡೆಯ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್‌ ಸೇರಿದಂತೆ ಒಟ್ಟು 14 ಯುನಿಟ್‌ಗಳು ಬರುತ್ತವೆ. ಕೈಗಾರಿಕಾ ಭದ್ರತಾ ಪಡೆಗೆ ತನ್ನದೇ ಆದ ಛಾಪು ಇದೆ. ಇದು ಸಹಜವಾಗಿ ಎಲ್ಲೆಂದರೆಲ್ಲಿ ಭದ್ರತೆ ನೀಡುವಂತಹ ಪಡೆಯಲ್ಲ. ವಿಮಾನ ನಿಲ್ದಾಣ, ಜಲಾಶಯ, ಕಾರಾಗೃಹ, ಸುವರ್ಣ ವಿಧಾನಸೌಧ, ಹೈಕೋರ್ಟ್‌ ಸೇರಿದಂತೆ ವಿವಿಧ ಸೂಕ್ಷ್ಮ ಸ್ಥಾವರಗಳಲ್ಲಿನ ಭದ್ರತೆಯ ಜವಾಬ್ದಾರಿ ಈ ಕೈಗಾರಿಕಾ ಭದ್ರತಾ ಪಡೆಯದ್ದಾಗಿರುತ್ತದೆ. ಸಾವಿರಾರು ಜನ ಸಿಬ್ಬಂದಿಗಳು ಇಲ್ಲಿರುತ್ತಾರೆ. ರಾಜ್ಯ ಗೃಹ ಇಲಾಖೆಯ ವ್ಯಾಪ್ತಿಗೆ ಇದು ಕೂಡ ಬರುತ್ತದೆ.

ವರ್ಗಾವಣೆ:

ಹಾಗೆ ನೋಡಿದರೆ ಸರ್ಕಾರದ ಯಾವುದೇ ಇಲಾಖೆಯಾದರೂ ನಾಲ್ಕೈದು ವರ್ಷಕ್ಕೊಮ್ಮೆ ವರ್ಗಾವಣೆ ಆಗುವುದು ಮಾಮೂಲಿ. ಅದೇ ರೀತಿ ಕೈಗಾರಿಕಾ ಭದ್ರತಾ ಪಡೆಯಲ್ಲೂ ವರ್ಗಾವಣೆಯಾಗುತ್ತಲೇ ಇರುತ್ತದೆ. ಆದರೆ ಪೇದೆ, ಮುಖ್ಯಪೇದೆ, ಎಎಸ್‌ಐ, ಪಿಎಸ್‌ಐ ಹೀಗೆ ಬೇರೆ ಬೇರೆ ಕ್ಯಾಟಗೇರಿಯ ಸಿಬ್ಬಂದಿಗಳ ವರ್ಗಾವಣೆ ನಡೆಯುತ್ತಲೇ ಇರುತ್ತದೆ. ಪೇದೆ ಹಾಗೂ ಮುಖ್ಯಪೇದೆಗಳ ವರ್ಗಾವಣೆಯ ಜವಾಬ್ದಾರಿ ಆಯಾ ಕೇಂದ್ರ ಕಮಾಂಡೆಂಟ್‌ ಆಫೀಸರ ಜವಾಬ್ದಾರಿಯಾಗಿರುತ್ತದೆ. ರಾಜ್ಯದ ಡಿಜಿಪಿ (ಐಎಸ್‌ಡಿ) ನಿರ್ದೇಶನದ ಮೇಲೆ ಕಮಾಂಡೆಂಟ್‌ ವರ್ಗಾವಣೆ ಮಾಡುತ್ತಿರುತ್ತಾರೆ.

ದೊಡ್ಡ ದಂಧೆ:

ಆದರೆ ಇಲ್ಲಿನ ಪಿಸಿ, ಎಚ್‌ಪಿಸಿ, ಎಫ್‌ಎಚ್‌ಪಿಸಿಗಳ ವರ್ಗಾವಣೆ ದೊಡ್ಡ ದಂಧೆಯಂತಾಗಿದೆ. ಒಂದು ಸ್ಥಳದಲ್ಲಿ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿರುತ್ತಾರೆ. ಅವರನ್ನು ಎತ್ತಿ ಬೇರೆಡೆ ವರ್ಗ ಮಾಡಿರುತ್ತಾರೆ. ಆದರೆ ಅವರು ಕೊಂಚ ಶಿಫಾರಸು ಹಾಗೂ ಲಂಚ ಕೊಡಲು ಸಿದ್ಧರಾದರೆ ವರ್ಗಾವಣೆಯಾಗಿ ಒಂದೇ ತಿಂಗಳಲ್ಲೇ ಹಿಂದಿನ ಜಾಗಕ್ಕೆ ಮರುವರ್ಗ ಮಾಡಲಾಗುತ್ತದೆ.

ಕಳೆದ ಜೂನ್‌, ಸೆಪ್ಟೆಂಬರ್‌ ತಿಂಗಳಲ್ಲಿ ಬರೋಬ್ಬರಿ 158ಕ್ಕೂ ಹೆಚ್ಚು ಪಿಸಿ, ಎಚ್‌ಸಿ, ಮಪಿಸಿ, ಮಎಚ್‌ಸಿಗಳ ವರ್ಗಾವಣೆಯಾಗಿತ್ತು. ಆದರೆ ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲೇ ಹಿಂದೆ ವರ್ಗಾವಣೆಯಾಗಿದ್ದ ಸರಿಸುಮಾರು 45ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಮರು ವರ್ಗ ಮಾಡಿ ಹಿಂದೆ ಅವರಿದ್ದ ಜಾಗೆಗೇ ನಿಯೋಜಿಸಲಾಗಿದೆ.

ಹೇಗೆ ಸಾಧ್ಯ?

ನಾಲ್ಕೈದು ವರ್ಷ ಒಂದೆಡೆ ಕೆಲಸ ಮಾಡಿ ಬಳಿಕ ವರ್ಗಾವಣೆಯಾಗಿ ಹೋದ ಸಿಬ್ಬಂದಿ ಮರಳಿ ತಾನಿದ್ದ ಜಾಗೆಗೆ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಇಲ್ಲಿನ ಸಿಬ್ಬಂದಿ ಎಲ್ಲವೂ ದುಡ್ಡಿನ ಮಹಿಮೆ. ಮರು ವರ್ಗಾವಣೆಗೆ ಕೆಲವೊಂದಿಷ್ಟು ಜನ ಅಧಿಕಾರಿಗಳ ಏಜೆಂಟರಂತೆ ಕೆಲಸ ಮಾಡುತ್ತಾರೆಂಬ ಆರೋಪ ಇಲ್ಲಿನ ಸಿಬ್ಬಂದಿಗಳದ್ದು. ಪಿಸಿಗೆ ಇಷ್ಟು ಸಾವಿರ, ಎಚ್‌ಸಿಗೆ ಇಷ್ಟು ಸಾವಿರ ಎಂದು ದರ ಕೂಡ ನಿಗದಿಪಡಿಸಲಾಗಿದೆಯಂತೆ. ಅಷ್ಟು ಕೊಟ್ಟು ಬಂದರೆ ಸಾಕು ಒಂದು ವಾರದಲ್ಲೇ ಮರುವರ್ಗದ ಆದೇಶ ಹೊರಬೀಳುತ್ತದೆ ಎಂದು ಹೇಳಲಾಗುತ್ತದೆ.

ವರ್ಗಾವಣೆಯಾಗಿದ್ದ 158 ಜನರ ಪೈಕಿ 45ಕ್ಕೂ ಹೆಚ್ಚು ಸಿಬ್ಬಂದಿ ಇದೇ ರೀತಿ ಮರುವರ್ಗ ಮಾಡಿಕೊಂಡು ತಾವಿದ್ದ ಮೂಲ ಜಾಗೆಗೇ ಮತ್ತೆ ನಿಯೋಜನೆ ಕೂಡ ಆಗಿದ್ದಾರಂತೆ. ವರ್ಗಾವಣೆ ವಿಷಯದಲ್ಲಿ ಪ್ರಾಮಾಣಿಕ ಸಿಬ್ಬಂದಿಗಳಿಗೆ ಅನ್ಯಾಯವಾಗುತ್ತಿದೆ. ವರ್ಗಾವಣೆ ವಿಷಯದಲ್ಲಿ ಅಂಧಾದುಂಧಿ ನಡೆಯುತ್ತಿದೆ. ಇದರ ವಿರುದ್ಧ ಮರುವರ್ಗಾವಣೆ ಮಾಡಿಸಿಕೊಳ್ಳದೇ ಪ್ರಾಮಾಣಿಕವಾಗಿ ತಮಗೆ ವರ್ಗಾವಣೆ ಮಾಡಿದ್ದ ಜಾಗೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿಬ್ಬಂದಿ ಗೃಹ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇವರು ಮನವಿ ಸಲ್ಲಿಸುವ ಮುನ್ನವೇ ಕೈಗಾರಿಕಾ ಭದ್ರತಾ ಪಡೆಯಲ್ಲಿ ಆಗುತ್ತಿರುವ ಅಂಧಾದುಂಧಿಯ ಕಡಿವಾಣ ಹಾಕಲು ಗೃಹ ಸಚಿವರು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ಇಲಾಖೆಯಲ್ಲಿನ ಕರಾಮತ್ತಿಗೆ ಕಡಿವಾಣ ಹಾಕಬೇಕು ಎಂಬುದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯ ಆಗ್ರಹ.