ಸಾರಾಂಶ
ದೇಶದ ಭದ್ರತೆಗೆ ನೆರವಾಗುವ ನಿಟ್ಟಿನಲ್ಲಿ ಬೆಲ್ಜಿಯಂ ಮೆಲಿನೋಯ್ಸ್ ಶ್ವಾನ ತಳಿ ಎರಡು ಮರಿಯನ್ನು ಅಂಕೋಲಾದ ರಾಘವೇಂದ್ರ ಭಟ್ ಅವರು ಸಿಆರ್‌ಪಿಎಫ್‌ಗೆ ಕೊಡುಗೆಯಾಗಿ ನೀಡಿದ್ದಾರೆ.
ಕಾರವಾರ : ಜಮ್ಮು- ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಂನಲ್ಲಿ ಭಯೋತ್ಪಾದಕ ದಾಳಿಯಾದ ಬೆನ್ನಲ್ಲೇ ದೇಶದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ದೇಶದ ಭದ್ರತೆಗೆ ನೆರವಾಗುವ ನಿಟ್ಟಿನಲ್ಲಿ ಬೆಲ್ಜಿಯಂ ಮೆಲಿನೋಯ್ಸ್ ಶ್ವಾನ ತಳಿ ಎರಡು ಮರಿಯನ್ನು ಅಂಕೋಲಾದ ರಾಘವೇಂದ್ರ ಭಟ್ ಅವರು ಸಿಆರ್‌ಪಿಎಫ್‌ಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಶ್ವಾನಗಳ ಬೆಲೆ ತಲಾ ಒಂದು ಲಕ್ಷ ರುಪಾಯಿ!
ಭಾನುವಾರ ಅಂಕೋಲಾದ ಬಾವಿಕೇರಿ ತಮ್ಮ ನಿವಾಸದಲ್ಲಿ ಸಿಆರ್‌ಪಿಎಫ್‌ನ ರಮೇಶ ಕೆ.ಆರ್. ಹಾಗೂ ಸಜ್ಜನ ಸಿಂಗ್ ಅವರಿಗೆ ರಾಘವೇಂದ್ರ ಭಟ್ ಹಾಗೂ ಅವರ ಪತ್ನಿ ರಾಜೇಶ್ವರಿ ಅವರು ಶ್ವಾನದ ಮರಿಗಳನ್ನು ಹಸ್ತಾಂತರಿಸಿದರು. ಈ ನಾಯಿ ಮರಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಿ ದೇಶದ ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಭಾರತೀಯ ಸೇನೆಯವರು ಇವರು ಸಾಕಿದ ಶ್ವಾನ ಮರಿಗಳ ದಕ್ಷತೆ, ಕಾರ್ಯನಿರ್ವಹಣೆಯನ್ನು ಗಮನಿಸಿ ಇದೆ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ಮರಿಗಳನ್ನು ಖರೀದಿಸಿ ಆಸ್ಸಾಂಗೆ ಕೊಂಡೊಯ್ದಿದ್ದರು. ಅಲ್ಲಿ ತರಬೇತಿ ನೀಡಿ ಆ ಎಲ್ಲ ಶ್ವಾನಗಳನ್ನು ಈಗ ದೇಶ ಸೇವೆಗೆ ನಿಯೋಜಿಸಲಾಗಿದೆ.
ಬೆಲ್ಜಿಯಂ ಮೆಲಿನೋಯ್ಸ್ ಶ್ವಾನಗಳು 10 ಅಡಿಯಷ್ಟು ದೂರ ಜಿಗಿಯಬಲ್ಲವು. ಚುರುಕಾಗಿ ಓಡಬಲ್ಲವು. ಸೂಕ್ತ ತರಬೇತಿ ನೀಡಿದಲ್ಲಿ ಬಾಂಬ್, ಡ್ರಗ್ಸ್ ಪತ್ತೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಕೆ ಮಾಡಲು ಯೋಗ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿಯಾಗಿರುವ ರಾಘವೇಂದ್ರ ಭಟ್ 27 ವರ್ಷಗಳಿಂದ ನಾಯಿ ಸಾಕುತ್ತಿದ್ದಾರೆ. ರಾಘವೇಂದ್ರ ಭಟ್ ಅವರು ಸಾಕಿದ ಶ್ವಾನಗಳು ಬೆಂಗಳೂರು ಪೊಲೀಸ್ ಇಲಾಖೆ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ, ಕಾರ್ಕಳ ಎಎನ್‌ಎಫ್‌ನಲ್ಲೂ ಸೇವೆ ಸಲ್ಲಿಸುತ್ತಿವೆ.
ನಾನು ಸಾಕಿದ ಶ್ವಾನದ 17 ಮರಿಗಳನ್ನು ಭಾರತೀಯ ಸೇನೆಯವರು ದೇಶ ಸೇವೆಗೆ ಕೊಂಡೊಯ್ದಿದ್ದಾರೆ. ದೇಶದ ಭದ್ರತೆ, ಸುರಕ್ಷತೆಗೆ ಈ ಶ್ವಾನಗಳ ಅಗತ್ಯ ಮನಗಂಡು ಎರಡು ಮರಿಗಳನ್ನು ಸಿಆರ್‌ಪಿಎಫ್‌ಗೆ ಕೊಡುಗೆಯಾಗಿ ನೀಡುತ್ತಿದ್ದೇನೆ.
-ರಾಘವೇಂದ್ರ ಭಟ್, ಅಂಕೋಲಾ
;Resize=(128,128))
;Resize=(128,128))
;Resize=(128,128))