ಘಟನೆಯಲ್ಲಿ ಗಜೇಂದ್ರಗಡ ಪಟ್ಟಣದ ಶಿವಾಜಿಪೇಟೆಯ ನಿವಾಸಿಗಳಾದ ಮರಿಯಂಬಿ ಹುನಗುಂದ (55), ಅನ್ನಪೂರ್ಣ ಚಂಗಳಿ (45) ಮತ್ತು ಸುಜಾತ ಹೊಸಮನಿ (30) ಸಾವಿಗೀಡಾಗಿದ್ದಾರೆ.
ರೋಣ: ಸಮೀಪದ ಜಿಗಳೂರು ಗ್ರಾಮದ ಕೆರೆ ಬಳಿ ಕ್ರೂಸರ್ ಮತ್ತು ಕ್ಯಾಂಟರ್ ವಾಹನಗಳ ಮಧ್ಯೆ ಗುರುವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಸ್ಥಳದಲ್ಲಿಯೇ ಮೂವರು ಕೃಷಿ ಕಾರ್ಮಿಕರು ಮೃತಪಟ್ಟಿದ್ದು, ಕ್ರೂಸರ್ ಚಾಲಕ ಹಾಗೂ 15 ಮಹಿಳಾ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಗಜೇಂದ್ರಗಡ ಪಟ್ಟಣದಿಂದ ರೋಣ ಭಾಗದಲ್ಲಿ ಕಡಲೆ ಕೀಳುವ ಕೃಷಿ ಕೆಲಸಕ್ಕೆ ಕ್ರೂಸರ್ ಮೂಲಕ ತೆರಳುತ್ತಿದ್ದರು. ರೋಣ ಮಾರ್ಗವಾಗಿ ಗಜೇಂದ್ರಗಡಕ್ಕೆ ಹೋಗುತ್ತಿದ್ದ ಕ್ಯಾಂಟರ್ ವಾಹನ ಮಧ್ಯೆ ಡಿಕ್ಕಿಸಂಭವಿಸಿದೆ.ಘಟನೆಯಲ್ಲಿ ಗಜೇಂದ್ರಗಡ ಪಟ್ಟಣದ ಶಿವಾಜಿಪೇಟೆಯ ನಿವಾಸಿಗಳಾದ ಮರಿಯಂಬಿ ಹುನಗುಂದ (55), ಅನ್ನಪೂರ್ಣ ಚಂಗಳಿ (45) ಮತ್ತು ಸುಜಾತ ಹೊಸಮನಿ (30) ಸಾವಿಗೀಡಾಗಿದ್ದಾರೆ.
ಗಾಯಾಳುಗಳಾದ ಹೇಮಾ ನಿಡಗುಂದಿ, ಲಕ್ಷ್ಮವ್ವ ಬೋಯಿಟಿ, ಲಕ್ಷ್ಮೀ ಹಾಳಕೇರಿ, ದುರಗಮ್ಮ ಕಲ್ಲುಡಿ, ರುಕ್ಕವ್ವ ಆರ್ಯರ, ರತ್ನವ್ವ ಜಾಧವ, ಯಲ್ಲಮ್ಮ ಲೋಖಂಡೆ, ಯಮನವ್ವ ಹಾಳಕೇರಿ, ಲಕ್ಷವ್ವ ಹಾಳಕೇರಿ, ಸಂತವ್ವ ಜಾನಾಯಿ, ಲಕ್ಷ್ಮೀ ಹಾಳಕೇರಿ, ಶಶಿಕಲಾ ಮರಾಠ, ರತ್ನವ್ವ ಗೌಡರ, ಸುನಂದಾ ಹಾಳಕೇರಿ, ಸವಿತಾ ಹಾಳಕೇರಿ ಮತ್ತು ಕ್ರೂಸರ್ ವಾಹನ ಚಾಲಕ ಶಿವಪ್ಪ ಹೊಸಗೌಡ್ರ ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ರೋಣ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.ಕ್ಯಾಂಟರ್ ವಾಹನ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆ ಮೃತರ ಸಂಬಂಧಿಕರು ರೋಣ ಆಸ್ಪತ್ರೆಯಲ್ಲಿ ರೋಧಿಸುವ ದೃಶ್ಯ ಮನಕಲಕುವಂತಿತ್ತು.
ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಜಿ. ಪಾಟೀಲ ಅವರು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನೆಯಲ್ಲಿ ಮೃತರಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.