ಗುತ್ತಲ: ಟಿಂಪೋ ಟ್ರ್ಯಾಕ್ಸ್ (ಕ್ರೂಸರ್) ಹಾಗೂ ಕಾರಗಳು ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳಲ್ಲಿ ಒಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಹೊರ ವಲಯದಲ್ಲಿರುವ ಹಾವನೂರ -ಮೈಲಾರ ಮತ್ತು ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಹಾವನೂರ ಕಡೆಯಿಂದ ಗುತ್ತಲಕ್ಕೆ ಬರುತ್ತಿದ್ದ ಟೆಂಪೋ ಟ್ರ್ಯಾಕ್ಸ್ ಹಾಗೂ ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿಯಲ್ಲಿ ಶಿವಮೊಗ್ಗದಿಂದ ಗದಗನತ್ತ ತೆರಳುತ್ತಿದ್ದ ಕಾರ ನಡುವೆ ಡಿಕ್ಕಿಯಾಗಿದೆ. ಟಿಂಪೋ ಟ್ರ್ಯಾಕ್ಸ್ ಚಾಲಕ ಗುತ್ತಲದ ಮೈನುದ್ದೀನಸಾಬ ಫಕೃದ್ದೀನಸಾಬ ನೆಗಳೂರ (53), ಕಾರಿನಲ್ಲಿದ್ದ ಶಿವಮೊಗ್ಗ ನಗರದ ಕಾಕನಗೌಡ ಶಿವನಗೌಡ ಧರಣೆಪ್ಪಗೌಡ್ರ (49), ಅಬ್ದುಲ್ ಜಂಗಳಿಸಾಬ (63), ಮಮತಾಜ್ ಅಬ್ದುಲ್ (55) ಅಂಜುಮ್ ಮುರ್ತೂಜ್ (25) ಸಾಧಿಕ ಹುಸೇನಸಾಬ (22) ಇವರುಗಳಿಗೆ ಗಾಯಗಳಾಗಿವೆ. ಗಾಯಗೊಂಡವರಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ. ಡಿಕ್ಕಿ ರಭಸಕ್ಕೆ ಟೆಂಪೋ ಟ್ರ್ಯಾಕ್ಸ್ ಪಲ್ಟಿಯಾಗಿದ್ದು, ಕಾರು ನುಜ್ಜು ಗುಜ್ಜಾಗಿದೆ. ಅವೈಜ್ಞಾನಿಕ ಕ್ರಾಸ್: ನೂತನವಾಗಿ ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿಯಲ್ಲಿ ಕ್ರಾಸ್ ನಿರ್ಮಾಣ ಮಾಡಲಾಗಿದೆ. ಆದರೆ ಇದು ಹಾವನೂರ-ಮೈಲಾರ ರಸ್ತೆ ಮಧ್ಯ ಹೋಗುವುದರಿಂದ ಈ ರಸ್ತೆಯಲ್ಲಿ ಸರಿಯಾದ ಸೂಚನಾ ಫಲಕಗಳಿಲ್ಲ. ಹೊಸದಾಗಿ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಹೆದ್ದಾರಿ ಮಧ್ಯದಲ್ಲಿ ಮತ್ತೊಂದು ದಾರಿ ಇದೆ ಎಂಬುದು ಸಹ ಗೊತ್ತಾಗಲ್ಲ. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ವೇಗವಾಗಿ ಚಲಿಸುವ ಪರಿಣಾಮ ಅಪಘಾತವಾಗುತ್ತಿವೆ. ಕೆಶಿಪ್ ಯೋಜನಾ ಅಧಿಕಾರಿಗಳು ಈ ರಸ್ತೆಯಲ್ಲಿ ವಾಹನ ಸವಾರರಿಗೆ ಸೂಕ್ತ ಸೂಚನಾ ಫಲಗಳನ್ನು ಹಾಗೂ ವೇಗ ನಿಯಂತ್ರಕಗಳನ್ನು ಹಾಕಬೇಕೆಂದು ಸಾರ್ವಜನಿಕರು, ರೈತರು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಗುತ್ತಲ ಪೋಲಿಸ್ ಠಾಣೆಯ ಹವಾಲ್ದಾರಗಳಾದ ಎಲ್.ಎನ್. ಅಣ್ಣಿಗೇರಿ, ರವಿಯಪ್ಪ ಕೆ.ಎಸ್., 112 ಸಿಬ್ಬಂದಿಗಳಾದ ಎಸ್.ಬಿ. ಮಠಪತಿ, ಚಾಲಕ ತಾನಾಜಿ ಐರಣಿ ಭೇಟಿ ನೀಡಿದ್ದರು. ಘಟನೆ ಕುರಿತು ಗುತ್ತಲ ಠಾಣೆಯಲ್ಲಿ ಸೋಮವಾರ ರಾತ್ರಿವರೆಗೂ ಪ್ರಕರಣ ದಾಖಲಾಗಿಲ್ಲ.