ಸಿ.ಟಿ. ರವಿ ಪರಿಷತ್ ಸದಸ್ಯತ್ವ ರದ್ದು ಮಾಡುವಂತೆ ಕಾಂಗ್ರೆಸ್‌ ಆಗ್ರಹ

| Published : Dec 21 2024, 01:19 AM IST

ಸಿ.ಟಿ. ರವಿ ಪರಿಷತ್ ಸದಸ್ಯತ್ವ ರದ್ದು ಮಾಡುವಂತೆ ಕಾಂಗ್ರೆಸ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸದನದಲ್ಲಿ ಸಿ.ಟಿ. ರವಿ ಅವ್ಯಾಚ್ಯ, ಅಸಂವಿಧಾನಿಕ ಪದ ಬಳಿಸಿರುವುದು ಅವರಲ್ಲಿರುವ ಮಹಿಳಾ ವಿರೋಧಿ ಸಂಸ್ಕೃತಿ ತೋರಿಸುತ್ತದೆ.

ಹುಬ್ಬಳ್ಳಿ:

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ವಿಪ ಸದಸ್ಯ ಸಿ.ಟಿ. ರವಿ ಅಸಂವಿಧಾನಿಕ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಶುಕ್ರವಾರ ಲಕ್ಷ್ಮೀ ಹೆಬ್ಬಾಳ್ಕರ್‌ ಅಭಿಮಾನಿಗಳ ಸಂಘ, ಮಹಿಳಾ ಕಾಂಗ್ರೆಸ್‌, ವೀರಶೈವ ಲಿಂಗಾಯತ ಸಮಾಜ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿ.ಟಿ. ರವಿ ಅವರನ್ನು ವಿಪ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಿದರು.

ಇಲ್ಲಿನ ಕೇಶ್ವಾಪುರದ ಸರ್ವೋದಯ ವೃತ್ತದಲ್ಲಿ ಸಮಾವೇಶಗೊಂಡ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳ ಸಂಘ, ವೀರಶೈವ-ಲಿಂಗಾಯತ ಸಮಾಜ, ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂರಾರು ಕಾರ್ಯಕರ್ತರು ಸಿ.ಟಿ. ರವಿ ಪ್ರತಿಕೃತಿಗೆ ಚಪ್ಪಲಿಯ ಹಾರ ಹಾಕಿ, ಪ್ರತಿಕೃತಿ ದಹಿಸಿ, ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹುಬ್ಬಳ್ಳಿ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಅಧ್ಯಕ್ಷ ವೀರೇಶ ಉಂಡಿ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸದನದಲ್ಲಿ ಸಿ.ಟಿ. ರವಿ ಅವ್ಯಾಚ್ಯ, ಅಸಂವಿಧಾನಿಕ ಪದ ಬಳಿಸಿರುವುದು ಅವರಲ್ಲಿರುವ ಮಹಿಳಾ ವಿರೋಧಿ ಸಂಸ್ಕೃತಿ ತೋರಿಸುತ್ತದೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಕೂಡಲೇ ಅ‍ವರನ್ನು ಪರಿಷತ್ ಸದಸ್ಯತ್ವದಿಂದ ರದ್ದುಗೊಳಿಸಲು ಒತ್ತಾಯಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸುನೀಲ್ ಮಠಪತಿ ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುರಿತಂತೆ ಸದನದಲ್ಲಿ ಸಿ.ಟಿ. ರವಿ ನೀಡಿರುವ ಅಸಹ್ಯಕರ, ಅವ್ಯಾಚ್ಯ ಹೇಳಿಕೆ ಸಮಸ್ತ ಸ್ತ್ರೀ ಕುಲಕ್ಕೆ ಮಾಡಿರುವ ಅಪಮಾನವಾಗಿದೆ. ಕರ್ನಾಟಕ ಸಂಸದೀಯ ಇತಿಹಾಸದಲ್ಲಿ ಇದು ಒಂದು ಕರಾಳ ಹಾಗೂ ವಿಷಾದನೀಯ ಕ್ಷಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಇಕ್ಬಾಲ್ ನವಲೂರ, ಶಿವಕುಮಾರ ರಾಯನಗೌಡರ, ಉಣಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಷರೀಫ್ ಗರಗದ, ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಲಾವತಿ ದತ್ತವಾಡ ಮಾತನಾಡಿದರು.

ವೀರೇಶ ಕಡಕೋಳಮಠ, ಪ್ರಕಾಶ ಜಾಧವ್, ಕಾಶಿಮ್ ಕೂಡಲಗಿ, ಅಶೋಕ ಕಾಲದಗಿ, ಅಬ್ದುಲ್ ಗಣಿ ವಲಿಅಹ್ಮದ್, ಸಂತೋಷ ನಾಯಕ, ಗೀತಾ ಪಾಟೀಲ್, ಹರೀಶ ಪೂಜಾರ, ಸೈಫ್ ಎರಗಟ್ಟಿ, ಭೀಮರಾಯ ರಾಯಪುರ, ಪ್ರಕಾಶ ಮಾಯಕರ, ಪ್ರೇಮ್ ಜಾಧವ್ ಸೇರಿದಂತೆ ಹಲವರಿದ್ದರು. ಸಿ.ಟಿ. ರವಿ ಭಾವಚಿತ್ರಕ್ಕೆ ಶ್ರಾದ್ಧ

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲೂ ಹು-ಧಾ ಮಹಾನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೀಪಾ ಗೌರಿ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅಭಿಮಾನಿ ಬಳಗದ ಕಾರ್ಯಕರ್ತರು ವಿಪ ಸದಸ್ಯ ಸಿ.ಟಿ. ರವಿ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಭಾವಚಿತ್ರಕ್ಕೆ ಶ್ರಾದ್ಧ ಸಲ್ಲಿಸಿದರು.