ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಕರ್ನಾಟಕ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಬಾಕಿ ಹಣ ಪಾವತಿಯಾಗದಿದ್ದರಿಂದ, ಯಾದಗಿರಿ ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಪುಣೆ ಮೂಲದ ಕ್ರಸ್ನಾ ಡಯೋಗ್ನಾಸ್ಟಿಕ್ಸ್, ವೈದ್ಯಕೀಯ ಪ್ರಯೋಗಾಲಯ ಸಂಸ್ಥೆಯು ಸೆ.24ರಿಂದ ತನ್ನೆಲ್ಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರಿಂದಾಗಿ, ಯಾದಗಿರಿ, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಕಾರವಾರ, ಚಾಮರಾಜನಗರ, ಕೊಡಗು, ವಿಜಯಪುರ, ಧಾರವಾಡ, ಹಾವೇರಿ, ದಾವಣಗೆರೆ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್-ಎಂಆರ್‌ಐ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದ್ದು, ಬಡ ರೋಗಿಗಳು ಪರದಾಡುವಂತಾಗಿದೆ.ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ರಸ್ನಾ ಸಂಸ್ಥೆಯೊಡನೆ 24 ಮೇ 2017ರಲ್ಲಿ ನಡೆದ ಒಪ್ಪಂದದಂತೆ, ರೋಗಿಗಳಿಗೆ ಎಂಆರ್‌ಐ-ಸಿಟಿ ಸ್ಕ್ಯಾನಿಂಗ್ ಉಚಿತ ನೀಡಲಾಗುತ್ತಿತ್ತು. ಸ್ಕ್ಯಾನಿಂಗ್‌ಗೆ ಬರುವ ಪ್ರತಿ ರೋಗಿಗಳ ಆಧಾರ್ ಕಾರ್ಡ್ ಆಧಾರದ ಮೇಲೆ ಕಂಪನಿಗೆ ಸರ್ಕಾರ ದುಡ್ಡು ನೀಡುತ್ತಿತ್ತು.
ಈಗ ಕ್ರಸ್ನಾ ಲ್ಯಾಬೋರೇಟರೀಸ್ ಈ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ, ಸರ್ಕಾರಿ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನೇ ನಂಬಿರುವ ಬಡ ರೋಗಿಗಳು, ಖಾಸಗಿ ಆಸ್ಪತ್ರೆಗೆ ಸುಮಾರು ಮೂರರಿಂದ ಮೂರುವರೆ ಸಾವಿರ ರು.ಗಳ ನೀಡಬೇಕಿದ್ದರಿಂದ ಕಂಗಾಲಾಗಿದ್ದಾರೆ. ದಿನವೊಂದಕ್ಕೆ ಏನಿಲ್ಲವೆಂದರೂ ಯಾದಗಿರಿಯಲ್ಲಿ 55-60 ರೋಗಿಗಳು ಎಂಆರ್‌ಐ-ಸ್ಕ್ಯಾನಿಂಗ್ ಸೇವೆ ಪಡೆಯುತ್ತಿದ್ದರು. ಈಗ ಕಳೆದೆರಡು ದಿನಗಳಿಂದ ಗಂಭೀರ ಕಾಯಿಲೆ, ಗರ್ಭಿಣಿಯರು ಖಾಸಗಿ ಕೇಂದ್ರಗಳತ್ತ ಹೆಚ್ಚಿನ ದುಡ್ಡು ಕೊಟ್ಟು ತೆರಳುವ ಅನಿವಾರ್ಯತೆ ಉಂಟಾಗಿದೆ.ಹೀಗೆ ಏಕಾಏಕಿ ಸೇವೆಗಳ ಸ್ಥಗಿತಗೊಳಿಸಲು ಆಗದು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಸಂಸ್ಥೆಗೆ ತಿಳಿಸಿದ್ದಾದರೂ, ಗುರುವಾರ ಈ ಸೇವೆ ರೋಗಿಗಳಿಗೆ ಲಭ್ಯವಾಗಿಲ್ಲ. 17 ರಾಜ್ಯಗಳಲ್ಲಿನ 150ಕ್ಕೂ ಹೆಚ್ಚು ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಪ್ರಯೋಗಾಲಯ ಪರೀಕ್ಷೆ- ವರದಿ ನೀಡುತ್ತಿರುವ ಕ್ರಸ್ನಾ ಸಂಸ್ಥೆಯ ಈ ನಿರ್ಧಾರದ ಕುರಿತು ಬುಧವಾರ ಮಾಧ್ಯಮದಲ್ಲಿ ವರದಿಯಾಗಿತ್ತು.
ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಇದ ಪರಿಶೀಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಯಾವುದೇ ತರಹದ ಅನುದಾನ ಕೊರತೆ ಇಲ್ಲ, ದಾಖಲಾತಿಗಳಲ್ಲಿ ಮಾಹಿತಿ ಕೊರತೆ ವಿವರಣೆಯನ್ನು ಸಂಸ್ಥೆಗೆ ಕೇಳಿದ್ದರಿಂದ ಹೀಗಾಗಿದೆ ಎಂದು ತಿಳಿಸಿದ್ದ ಇಲ್ಲಿನ ಅಧಿಕಾರಿಗಳು, ಸೇವೆ ಮುಂದುವರೆಸದಿದ್ದರೆ ಪರ್ಯಾಯ ವ್ಯವಸ್ಥೆಯ ಎಚ್ಚರಿಕೆ ನೀಡಿದ್ದರು. ಆದರೆ, ಕ್ರಸ್ನಾ ಸಂಸ್ಥೆಯ ಆಡಳಿತಾಧಿಕಾರಿಗಳು ಸೂಚಿಸುವವರೆಗೆ ಸೇವೆ ಆರಂಭಿಸಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಸರ್ಕಾರ ಹಾಗೂ ಸಂಸ್ಥೆಯ ನಡುವಿನ ಜಟಾಪಟಿ ಬಡ ರೋಗಿಗಳ ಪರದಾಟಕ್ಕೆ ಕಾರಣವಾಗಿದೆ.ಆರೋಗ್ಯ ಸಚಿವರಿಗೆ ಶಾಸಕ ಕಂದಕೂರು ಪತ್ರ
ಯಾದಗಿರಿ:ಎಂಆರ್‌ಐ-ಸ್ಕ್ಯಾನಿಂಗ್ ಸೌಲಭ್ಯಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಡ ರೋಗಿಗಳು ಪರದಾಡುವಂತಾಗಿದೆ ಎಂದು ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರು, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಈ ಮಾಹಿತಿ ತಿಳಿಸಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
ಸರ್ಕಾರ ಮತ್ತು ಸಂಸ್ಥೆಯ ಗುದ್ದಾಟದಿಂದಾಗಿ ಬಡ ರೋಗಿಗಳಿಗೆ ತೊದರೆ ಎದುರಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಜ್ಞರು ಸಂಸ್ಥೆಗೆ ಎಚ್ಚರಿಕೆ ಪತ್ರ ನೀಡಿದ್ದರೂ ಸೇವೆಗಳು ಆರಂಭವಾಗಿಲ್ಲ. ಗರ್ಭಿಣಿಯರು ಹಾಗೂ ಬಡ ರೋಗಿಗಳ ಹಿತದೃಷ್ಟಿಯಿಂದ ಸೇವೆಗಳ ಪುನಾರಂಭಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕಂದಕೂರು ಮನವಿ ಮಾಡಿದ್ದಾರೆ.ಬ್ಲಡ್ ಬ್ಯಾಂಕಿಗೂ ಬರ!
ಯಾದಗಿರಿ:ಜಿಲ್ಲೆಯಲ್ಲಿ ರಕ್ತನಿಧಿ ಕೇಂದ್ರ (ಬ್ಲಡ್ ಬ್ಯಾಂಕ್) ಇಲ್ಲದೇ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಸಾವುನೋವುಗಳು ಹೆಚ್ಚಳ ಕಾಣುತ್ತಿರುವ ಯಾದಗಿರಿ ಜಿಲ್ಲೆಯಲ್ಲಿ ಈಗ ಎಂಆರ್‌ಐ-ಸ್ಕ್ಯಾನಿಂಗ್ ಸೇವೆಯೂ ಅಲಭ್ಯವಾಗಿರುವುದು ಬಡರೋಗಿಗಳ ಆತಂಕ ಹೆಚ್ಚಿಸಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದರೂ ಸಹ, ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಬ್ಲಡ್ ಬ್ಯಾಂಕೇ ಇಲ್ಲ. ಕಲಬುರಗಿ-ರಾಯಚೂರು ಜಿಲ್ಲೆಗಳಿಂದ ರೋಗಿಗಳು ನಾಲ್ಕೈದು ಪಟ್ಟು ಹೆಚ್ಚು ದರ ನೀಡಿ ರೋಗಿಗಳ ಚಿಕಿತ್ಸೆಗೆ ರಕ್ತ ತರಿಸುತ್ತಾರೆ. ಯಾದಗಿರಿ ಮೆಡಿಕಲ್ ಕಾಲೇಜಿನಲ್ಲಿ ಅವ್ಯವಸ್ಥೆ ಹಾಗೂ ಬ್ಲಡ್ ಬ್ಯಾಂಕ್ ಇಲ್ಲದ ಕಾರಣ ರಾಷ್ಟ್ರೀಯ ಆರೋಗ್ಯ ಸಮಿತಿ 15 ಲಕ್ಷ ರು.ಗಳ ದಂಡ ವಿಧಿಸಿತ್ತು.