ಅಭಿವೃದ್ಧಿಗಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಭೀಮುನಾಯಕ

| Published : Feb 12 2024, 01:30 AM IST

ಸಾರಾಂಶ

ಸರ್ಕಾರದ ಹಲವು ಯೋಜನೆಗಳಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಪರಿಶೀಲನೆಗೆ ಆಗಮಿಸುವ ಮೇಲಧಿಕಾರಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ನಮ್ಮ ಕರವೇ ಕಾರ್ಯಕರ್ತರು ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಯಾದಗಿರಿ

ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಹಾಗೂ ಸರ್ಕಾರದ ಹಲವು ಯೋಜನೆಗಳಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಪರಿಶೀಲನೆಗೆ ಆಗಮಿಸುವ ಮೇಲಾಧಿಕಾರಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ನಮ್ಮ ಕರವೇ ಕಾರ್ಯಕರ್ತರು ಬೆಳೆಸಿಕೊಳ್ಳಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.

ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ನಡೆದ ಯಾದಗಿರಿ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಎಲ್ಲಿಯವರೆಗೆ ನಾವು ಪ್ರಶ್ನಿಸುವ ಭಾವನೆ ಬೆಳೆಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಭಾಗ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.

ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ವೈದ್ಯರು ಇರಬೇಕೆಂದು ಸರ್ಕಾರದ ನಿಯಮವಿದ್ದು, ಎಷ್ಟೋ ಆಸ್ಪತ್ರೆಗಳಲ್ಲಿ ವೈದ್ಯರು ಇರುವುದಿಲ್ಲ. ಇದರಿಂದ ಎಷ್ಟೋ ಗರ್ಭಿಣಿಯರು ಮರಣ ಹೊಂದಿದ ಉದಾಹರಣೆಗಳಿವೆ. ಅದರ ಜೊತೆಗೆ ಅಪಘಾತ ಪ್ರಕರಣಗಳು ನಡೆದಾಗ ಪ್ರಥಮ ಚಿಕಿತ್ಸೆಗಾಗಿಯೂ ಹಲವರು ಪರದಾಡುವುದನ್ನು ನಾವು ಕಂಡಿದ್ದೇವೆ. ಇಂತಹ ಪ್ರಕರಣಗಳು ಕಂಡು ಬಂದ ತಕ್ಷಣ ನಮ್ಮ ಕಾರ್ಯಕರ್ತರು ಅಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿಗಳಿಗೆ ತಿಳಿಹೇಳಿ ಜನರಿಗೆ ಸಹಾಯ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕರವೇ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ಯಾದಗಿರಿ ತಾಲೂಕಿನಲ್ಲಿ ಆಂಬ್ಯುಲೆನ್ಸ್ ಕೊರತೆ ಕಂಡು ಬರುತ್ತಿದ್ದು, ಹತ್ತಿಕುಣಿ ಸೇರಿದಂತೆ ಕೆಲವು ಹೋಬಳಿಗಳಲ್ಲಿ ಆ್ಯಂಬುಲೆನ್ಸ್ ಕೊರತೆ ನೀಗಿಸಲು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಇದರ ಜೊತೆಗೆ ಹಲವು ಸಮಸ್ಯೆಗಳ ಕುರಿತು ಹೋರಾಟವನ್ನು ಕೂಡ ಹಮ್ಮಿಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಇದ್ದರು.

* ಪದಾಧಿಕಾರಿಗಳು : ಗೌರವ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕನ್ನಡಿ, ಪ್ರಧಾನ ಕಾರ್ಯದರ್ಶಿ ಮತ್ತು ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸುರೇಶ ಬೆಳಗುಂದಿ, ಉಪಾಧ್ಯಕ್ಷರಾಗಿ ವೆಂಕಟರಾಮಲು ಸೈದಾಪೂರ, ಸಿದ್ದು ಸಾಹುಕಾರ ಠಾಣಗುಂದಿ, ಸುಭಾಷ ಯರಗೋಳ, ಸಂಘಟನಾಕಾರ್ಯದರ್ಶಿಗಳಾಗಿ ಲಕ್ಷ್ಮಣ ಕೂಡ್ಲೂರು, ಶ್ರೀನಿವಾಸ ಚಿಕ್ಕಬಾನರ್, ಸಹ ಕಾರ್ಯದರ್ಶಿಯಾಗಿ ಮಲ್ಲು ಕೋಲ್ಕರ್, ಶರಣು ಮಡಿವಾಳ, ಪ್ರಧಾನ ಸಂಚಾಲಕರಾಗಿ ಅಂಬಣ್ಣ ಹೋರುಂಚಾ, ಸಲೀಂ ಚಾಹುಸ್, ಸಂಚಾಲಕರು ಸಾಬಯ್ಯ ಗುತ್ತೇದಾರ, ರಫಿಕ್ ವರ್ಕನಳ್ಳಿ, ರಾಜುಗೌಡ ಪಗಲಾಪೂರ ಚಾಲಕರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.

ಅದರಂತರ ಯಾದಗಿರಿ ವಲಯ ಅಧ್ಯಕ್ಷರಾಗಿ ಮಹೇಶ ಠಾಣಗುಂದಿ, ಹತ್ತಿಕುಣಿ ವಲಯ ಅಧ್ಯಕ್ಷರಾಗಿ ನಾಗಪ್ಪ ಗೋಪಾಳಪೂರ, ಬಳಿಚಕ್ರ ವಲಯ ಅಧ್ಯಕ್ಷರಾಗಿ ಸೈದಪ್ಪ ಗೌಡಗೇರಾ ಅವರನ್ನು ನೇಮಕ ಮಾಡಲಾಯಿತು.