ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನಿಮ್ಮ ಶೈಕ್ಷಣಿಕ ಜೀವನದ ಮೊದಲ ಹಂತದಲ್ಲಿ ಸಾಧನೆ ಮಾಡಲು ಶಿಸ್ತು, ದೃಢತೆ, ತ್ಯಾಗ ಈ ಮೂರು ಗುಣ ಅಳವಡಿಸಿಕೊಂಡು ನಿರಂತರ ಓದಿಗೆ ಸಂಕಲ್ಪ ಮಾಡಬೇಕು ಎಂದು ಎಸ್ಸೆಸ್ಸೆಲ್ಸಿ ನಿವೃತ್ತ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಕರೆ ನೀಡಿದರು.ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಚ್.ಗೊಲ್ಲಹಳ್ಳಿಯ ಸ್ವಾಮಿ ವಿವೇಕಾನಂದ ಅನುದಾನಿತ ಪ್ರೌಢಶಾಲೆಯಲ್ಲಿ ಸೆಂಟ್ ಆನ್ಸ್ ಪ್ರೌಢಶಾಲೆ, ಕುವೆಂಪು ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ೨೦೨೪- ೨೫ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಕೆಯಲ್ಲಿ ಶಿಸ್ತು ಇರಬೇಕು, ನೀವು ಸಮಯ ವ್ಯರ್ಥ ಮಾಡದೇ ಓದುವ ದೃಢ ನಿರ್ಧಾರ ಕೈಗೊಳ್ಳಿ, ಸಿನಿಮಾ, ಕ್ರೀಡೆ, ನಿಮ್ಮ ಇತರೆಲ್ಲಾ ಚಟುವಟಿಕೆಗಳನ್ನು ಒಂದೆರಡು ತಿಂಗಳು ತ್ಯಾಗ ಮಾಡುವ ಸಂಕಲ್ಪ ಮಾಡಬೇಕು ಎಂದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದಿರಿ, ಪ್ರತಿಕ್ಷಣವೂ ಅಮೂಲ್ಯವಾಗಿದ್ದು, ಬರವಣಿಗೆ ಉತ್ತಮಪಡಿಸಿಕೊಳ್ಳಿ, ನಿರಂತರ ಅಧ್ಯಯನ ಮಾಡಿ ಎಂದು ಕಿವಿಮಾತು ಹೇಳಿದ ಅವರು, ಇದು ನಿಮ್ಮ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ, ಅದಕ್ಕೆ ಹೆದರುವ ಅಗತ್ಯವಿಲ್ಲ, ಪರಿಶ್ರಮ ಹಾಕಿ ಓದಿರುವಾಗ ನೀವು ಧೈರ್ಯದಿಂದಲೇ ಪರೀಕ್ಷೆ ಎದುರಿಸಬಹುದು ಎಂದರು.ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ಮೂಲಕ ಶೇ.೧೦೦ ರಷ್ಟು ಸಾಧನೆಗೆ ಪಠ್ಯ ಓದಿಗೆ ಒತ್ತು ನೀಡಿ ಎಂದರು.
ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ನೀವು ಉತ್ತರಿಸಲು ಸಿದ್ಧರಾಗಿರಬೇಕು, ಅದಕ್ಕೆ ಪರಿಶ್ರಮದ ಅಗತ್ಯವಿದೆ, ವೇಳಾಪಟ್ಟಿ ಹಾಕಿಕೊಂಡು ಅಧ್ಯಯನ ಮಾಡಿ ಎಂದರು.ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರಿ ಎಂದು ತಿಳಿಸಿದರು.
ಶಿಕ್ಷಕರು ಕಲಿಕೆಯಲ್ಲಿ ಪ್ರಾಯೋಗಿಕ, ಕಲಿಕೋಪಕರಣ ಬಳಸಲು ಸೂಚಿಸಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಿ ಎಂದು ತಿಳಿಸಿ, ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ತರಗತಿ ಕೊಠಡಿಯಲ್ಲಿ ನಿಮ್ಮ ಎಲ್ಲಾ ಆಲೋಚನೆ ಬದಿಗಿಡಿ, ಕೇವಲ ಶಿಕ್ಷಕರ ಮಾತು ಮಾತ್ರ ನಿಮ್ಮ ಕಿವಿಗೆ ಬೀಳುತ್ತಿರುವಂತೆ ಏಕಾಗ್ರತೆ ಸಾಧಿಸಿ ಎಂದರು.ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಕಾರ್ಯದರ್ಶಿ ಬಿ.ಸಿ.ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ವೆಂಕಟರಮಣಪ್ಪ, ಸೆಂಟ್ ಆನ್ಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅಂತೋಣಿ ಮೇರಿ, ಕುವೆಂಪು ಪ್ರೌಢಶಾಲೆಯ ನವೀನ್, ಕೋಲಾರ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ ಇದ್ದರು.