ಇಲಾಖೆಯಿಂದ ಸಿಗುವ ತಾಂತ್ರಿಕ ಬೆಂಬಲ ಮತ್ತು ಆರ್ಥಿಕ ನೆರವಿನ ಕುರಿತು ಸಂಪೂರ್ಣ ಮಾಹಿತಿ ನೀಡುವ ಮೂಲಕ ಪಾಲ್ಗೊಂಡ ಎಲ್ಲ ಮಹಿಳೆಯರಲ್ಲಿ ಸ್ವಾವಲಂಬನೆಯ ಹೊಸ ಭರವಸೆ
ತೆಕ್ಕಲಕೋಟೆ: ಗ್ರಾಮೀಣ ಭಾಗದ ಮಹಿಳೆಯರಿಗೆ ಕೃಷಿ ಉಪಕಸುಬು, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ಆರ್ಥಿಕ ಸಬಲತೆ ತರುವುದು ಹಾಗೂ ಪರಿಸರ ಸ್ನೇಹಿ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದಾಗಿತ್ತು. ರೈತ ಮಹಿಳೆಯರು, ಕೃಷಿ ಸಖಿಯರು ಮತ್ತು ಪಶು ಸಖಿಯರು ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ ಇಂತಹ ಕೌಶಲ್ಯಧಾರಿತ ತರಬೇತಿ ಬಳಸಿಕೊಂಡು ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಹೇಳಿದರು.
ಸಿರುಗುಪ್ಪ ನಗರದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಪ್ರಗತಿಪರ ರೈತ ಮಹಿಳೆಯರು, ಕೃಷಿ ಸಖಿಯರು ಹಾಗೂ ಪಶು ಸಖಿಯರಿಗಾಗಿ ಒಂದು ದಿನದ ವಿಶೇಷ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಲಾಖೆಯಿಂದ ಸಿಗುವ ತಾಂತ್ರಿಕ ಬೆಂಬಲ ಮತ್ತು ಆರ್ಥಿಕ ನೆರವಿನ ಕುರಿತು ಸಂಪೂರ್ಣ ಮಾಹಿತಿ ನೀಡುವ ಮೂಲಕ ಪಾಲ್ಗೊಂಡ ಎಲ್ಲ ಮಹಿಳೆಯರಲ್ಲಿ ಸ್ವಾವಲಂಬನೆಯ ಹೊಸ ಭರವಸೆ ಮೂಡಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೃಷಿ,ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯಶಸ್ವಿ ಮಹಿಳೆಯರ ಪ್ರೇರಣಾದಾಯಿ ಯಶೋಗಾಥೆ ವಿಸ್ತಾರವಾಗಿ ಹಂಚಿಕೊಂಡರು. ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯ ಬಳಸಿಕೊಂಡು ಕಿರು ಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಿದ ಹಾಗೂ ಬಟ್ಟೆ ಚೀಲ ತಯಾರಿಕೆ ದೊಡ್ಡ ಮಟ್ಟದಲ್ಲಿ ನಡೆಸಿ ಇತರ ಮಹಿಳೆಯರಿಗೆ ಕೆಲಸ ನೀಡಿದ ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿ ತಿಳಿಸಿದರು.ಸಂಪನ್ಮೂಲ ವ್ಯಕ್ತಿ ಪ್ರಿಯಾ ಮಾತನಾಡಿ, ಬಟ್ಟೆ ಚೀಲಗಳ ತಯಾರಿಕೆಯ ಕುರಿತು ಸುದೀರ್ಘ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ತಡೆಯಲು ಮತ್ತು ದಿನನಿತ್ಯದ ಬಳಕೆಗೆ ಸೂಕ್ತ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ತಯಾರಿಸುವ ಅಗತ್ಯ ವಿವರಿಸಿದರು.
ಕೃಷಿ ಸಖಿಯರು ಹಾಗೂ ಪಶು ಸಖಿಯರು ತಮ್ಮ ಮನೆಗಳಲ್ಲಿಯೇ ಲಭ್ಯವಿರುವ ಹಳೆಯ ಬಟ್ಟೆ ಅಥವಾ ಕೈಗೆಟುಕುವ ದರದ ಕಾಟನ್ ಬಟ್ಟೆ ಬಳಸಿ ಗೃಹ ಉದ್ಯಮವಾಗಿ ಬ್ಯಾಗ್ ತಯಾರಿಕೆ ಹೇಗೆ ಪ್ರಾರಂಭಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸಿದರು.ಸಂಪನ್ಮೂಲ ವ್ಯಕ್ತಿ ಇಂದುಮತಿ ಮಾತನಾಡಿ, ಸ್ಥಳೀಯವಾಗಿ ಲಭ್ಯವಿರುವ ಕೃಷಿ ಉತ್ಪನ್ನಗಳಾದ ರಾಗಿ ಮತ್ತು ಟೊಮೆಟೊ ಬಳಸಿ ರುಚಿಕರ ಹಾಗೂ ಪೌಷ್ಟಿಕಾಂಶಯುಕ್ತ ಹಪ್ಪಳ ತಯಾರಿಸುವ ಪ್ರಕ್ರಿಯೆ ಸಂಪೂರ್ಣವಾಗಿ ವಿವರಿಸಿದರು. ಸಿರಿಧಾನ್ಯವಾದ ರಾಗಿಯಲ್ಲಿರುವ ಕ್ಯಾಲ್ಸಿಯಂ ಮತ್ತು ನಾರಿನಂಶದ ಮಹತ್ವ ತಿಳಿಸಿದ ಅವರು, ರಾಗಿ ಹಿಟ್ಟನ್ನು ಸರಿಯಾದ ಪ್ರಮಾಣದ ನೀರಿನಲ್ಲಿ ಬೇಯಿಸಿ, ಹದವಾಗಿ ನಾದಿ ಹಪ್ಪಳ ಒತ್ತುವ ವಿಧಾನ ತೋರಿಸಿದರು. ಅದೇ ರೀತಿ, ಟೊಮೆಟೊ ಬೆಳೆ ಹೆಚ್ಚಾಗಿ ಸಿಗುವ ಋತುವಿನಲ್ಲಿ ರೈತರಿಗೆ ಸೂಕ್ತ ಬೆಲೆ ಸಿಗದೆ ನಷ್ಟವಾಗುವುದನ್ನು ತಡೆಯಲು ಟೊಮೆಟೊ ಸಂಸ್ಕರಣೆಯು ಉತ್ತಮ ಪರಿಹಾರವೆಂದು ವಿವರಿಸಿದರು.