ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಂಡು ಮಹತ್ವದ ಸಾಧನೆಯತ್ತ ಹೆಜ್ಜೆಯನ್ನಿಡಬೇಕು ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.ನಗರದ ಕಾಳೇಗೌಡ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಯಾಗಿರುವಾಗಲೇ ಭವಿಷ್ಯದ ಬಗ್ಗೆ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಗುರಿ ಸಾಧನೆಗೆ ನಿರಂತರ ಶ್ರಮವಹಿಸಿದಾಗ ನಿರೀಕ್ಷಿತ ಗುರಿ ತಲುಪುವುದಕ್ಕೆ ಸಾಧ್ಯವಾಗಲಿದೆ ಎಂದು ನುಡಿದರು.
ವಿದ್ಯಾರ್ಥಿಗಳು ಪಠ್ಯವಿಷಯಗಳಿಗಷ್ಟೇ ಗಮನಹರಿಸದೆ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು. ಪತ್ರಿಕೆಗಳು, ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಮರ್ಥ್ಯ ಬರುತ್ತದೆ. ಇದರಿಂದ ಆತ್ಮವಿಶ್ವಾಸ ಹೆಚ್ಚುವುದರ ಜೊತೆ ಮನೋವಿಕಾಸವಾಗುತ್ತದೆ ಎಂದರು.ಮಕ್ಕಳ ಓದಿನ ಬಗ್ಗೆ ಹಾಗೂ ಅವರ ಪ್ರತಿಭೆಯನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಅವರಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಪೋಷಕರ ಕರ್ತವ್ಯ. ಶಿಕ್ಷಕರೂ ಕೂಡ ಮಕ್ಕಳ ಬೆಳವಣಿಗೆಯನ್ನು ಗಮನಿಸಿ ಅವರಿಗೆ ಆಸಕ್ತಿದಾಯಕವಾದ ವಿಷಯಗಳಲ್ಲಿ ತೊಡಗುವುದಕ್ಕೆ ಪ್ರೇರೇಪಿಸಿದಾಗ ಮಕ್ಕಳು ಆ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದಕ್ಕೆ ಸಹಕಾರಿಯಾಗುವುದು ಎಂದರು.
ಪಠ್ಯ ವಿಷಯಗಳ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆ- ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಪ್ರತಿಭಾವಂತರಾಗಿ ಬಹುಮುಖ ಪ್ರತಿಭೆಗಳಾಗಿ ಬೆಳವಣಿಗೆ ಕಾಣಬೇಕು. ಕ್ರೀಡೆಯನ್ನು ಅವಲಂಬಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಬೆಳವಣಿಗೆ ಕಾಣುತ್ತದೆ. ಧ್ಯಾನ, ಯೋಗ, ವ್ಯಾಯಾಮವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಾಗ ಏಕಾಗ್ರತೆ ಹೆಚ್ಚುತ್ತದೆ. ಸದಾ ಕಾಲ ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಇರುವುದಕ್ಕೆ ಸಾಧ್ಯವಾಗಲಿದೆ ಎಂದರು.ಮಕ್ಕಳು ವಿದ್ಯಾವಂತರಾಗುವುದಷ್ಟೇ ಅಲ್ಲ, ವಿನಯವಂತರು, ಮಾನವೀಯ ಹೃದಯವುಳ್ಳವರಾಗಬೇಕು. ತಂದೆ-ತಾಯಿ ಕಷ್ಟಪಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಾರೆ. ಅವರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವುದು ವಿದ್ಯಾರ್ಥಿಗಳಾದವರ ಕರ್ತವ್ಯ ಎಂದರು.
ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದೊಂದಿಗೆ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಅವಕಾಶಗಳ ಬಾಗಿಲು ಮುಕ್ತವಾಗಿ ತೆರೆದುಕೊಂಡಿವೆ. ಭವಿಷ್ಯವನ್ನು ಉಜ್ವಲಗೊಳಿಸಲು ಅವಕಾಶವಿರುವಂತಹ ಆಯ್ಕೆಗಳನ್ನು ಮಾಡಿಕೊಂಡು ಓದಿದ ಶಾಲೆಗೆ, ಹೆತ್ತವರಿಗೆ ಕೀರ್ತಿಯನ್ನು ತರುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎ.ಎಚ್.ನಾಗರತ್ನ ಬಹುಮಾನ ವಿತರಿಸಿದರು. ಡಾ.ಎಂ.ಎಸ್.ರಾಜೇಂದ್ರಪ್ರಸಾದ್ ಸ್ಮಾರಕ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಗುರುಸ್ವಾಮಿ, ಖಜಾಂಚಿ ಗುರುಕುಮಾರ್, ಸದಸ್ಯರಾದ ಡಾ.ಎಲ್.ನಿಶ್ಚಲ್‌ರಾಜ್, ಎಲ್.ಎಸ್.ಪ್ರಜ್ವಲ್‌ರಾಜ್, ಆಡಳಿತಾಧಿಕಾರಿ ಚಂದ್ರಪ್ರಭಾ ಇದ್ದರು.