ಬಾಲ್ಯದಲ್ಲಿಯೇ ಮಕ್ಕಳಲ್ಲಿ ಕನ್ನಡ ಅಭಿಮಾನ ಬೆಳೆಸಿ

| Published : Nov 02 2024, 01:38 AM IST / Updated: Nov 02 2024, 01:39 AM IST

ಸಾರಾಂಶ

Cultivate Kannada love in children at an early age

-ಹೊಳಲ್ಕೆರೆಯಲ್ಲಿ ನಡೆದ ರಾಜ್ಯೋತ್ಸವದಲ್ಲಿ ಶಾಸಕ ಎಂ.ಚಂದ್ರಪ್ಪ ಸಲಹೆ

ಕನ್ನಡಪ್ರಭವಾರ್ತೆ, ಹೊಳಲ್ಕೆರೆ

ಕನ್ನಡ ನಾಡು-ನುಡಿ, ನೆಲ, ಜಲದ ಬಗ್ಗೆ ಮಕ್ಕಳಲ್ಲಿ ಚಿಕ್ಕಂದಿನಿಂದಲೆ ಅಭಿಮಾನ ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.

ಪಟ್ಟಣದ ಸಂವಿಧಾನ ಸೌಧದಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಏಕೀಕರಣಕ್ಕಾಗಿ ಅನೇಕ ಮಹನೀಯರು ಹೋರಾಡಿ ಪ್ರಾಣ ತ್ಯಾಗ ಮಾಡಿದ ಫಲವಾಗಿ ನಾವು ಈಗ ಕನ್ನಡ ರಾಜ್ಯೋತ್ಸವ ಸಂಭ್ರಮಿಸುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ, ಆಲೂರು ವೆಂಕಟರಾಯರು ಸೇರಿ ಅನೇಕ ಹಿರಿಯರು ಕನ್ನಡಕ್ಕೆ ಶ್ರಮಿಸಿದ್ದಾರೆ. ಅಂತಹವರನ್ನೆಲ್ಲಾ ನೆನಪಿಸಿಕೊಳ್ಳಬೇಕೆಂದರು.

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಭಾಷೆ ಯಾವುದಾದರೂ ಇದ್ದರೆ ಅದು ಕನ್ನಡ ಮಾತ್ರ. ಕನ್ನಡದ ಜೊತೆ ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ತಾಯಿಯನ್ನು ಗೌರವಿಸಿದಂತೆ ಕನ್ನಡವನ್ನು ಪ್ರತಿಯೊಬ್ಬರು ಗೌರವಿಸಬೇಕು. ಸುಂದರವಾದ ಭಾಷೆ ಕನ್ನಡಕ್ಕೆ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಒತ್ತು ಕೊಡಬೇಕು. ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಸರ್ಕಾರ ಎಲ್ಲಾ ರೀತಿ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತದೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಸ್ವಂತ ಖರ್ಚಿನಿಂದ ಬಸ್ ವ್ಯವಸ್ಥೆ ಕಲ್ಪಿಸಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಮೂರ್ತಿ, ಕನ್ನಡ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪಿ.ಹನುಮಂತಪ್ಪ, ತಹಸೀಲ್ದಾರ್ ಬೀಬಿ ಫಾತಿಮಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಎಚ್., ಪುರಸಭೆ ಸದಸ್ಯರಾದ ಆರ್.ಎ. ಅಶೋಕ್, ಮುರುಗೇಶ್, ಮಲ್ಲಿಕಾರ್ಜುನಸ್ವಾಮಿ, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.

----------------

ಹೊಳಲ್ಕೆರೆ ಪಟ್ಟಣದ ಸಂವಿಧಾನ ಸೌಧದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ ನೀಡಿದರು.

-1ಸಿಟಿಡಿ8