ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡು, ದೇಶದ ಮಹಾನ್ ವ್ಯಕ್ತಿಗಳ ಜೀವನದ ಕಥೆಗಳನ್ನ ತಿಳಿದುಕೊಂಡು ಅವರಂತೆ ಮಹತ್ತರ ಸಾಧನೆ ಮಾಡುವ ಛಲ ಯುವ ಸಮುದಾಯಲ್ಲಿರಬೇಕು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯವು ನಾಡಿಗೆ ಹತ್ತು ಹಲವಾರು ಗೌರವಾನ್ವಿತ ಪ್ರಜೆಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ಹಾಗೂ ಸಮಾಜವನ್ನು ಸರಿದಾರಿಯತ್ತ ತೆಗೆದುಕೊಂಡು ಹೋಗುವ ಆದರ್ಶ ಶಿಕ್ಷಕರನ್ನ ನಿರ್ಮಾಣ ಮಾಡಿ ಕೊಡಲು ಸದಾ ಸಿದ್ಧವಾಗಿದೆ. ಸಮಾಜದ ರೂವಾರಿಗಳು ಇಂದಿನ ಶಿಕ್ಷಕರು ಅವರ ಮೇಲೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣು ನೆಟ್ಟಿರುತ್ತದೆ. ಅದಕ್ಕಾಗಿ ಸರಿಯಾದ ಮಾರ್ಗದಲ್ಲಿ ಮೊದಲು ಶಿಕ್ಷಕರು ನಡೆದು ಸಮಾಜವನ್ನು ಉನ್ನತೊನ್ನತ ಸ್ಥಿತಿಗೆ ತರುವ ಗುರುತರ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಯ್ಯ ಸಾಲಿಮಠ, ಅಧ್ಯಾಪಕರಿಗೆ, ಹೆತ್ತವರಿಗೆ ವಿಧೇಯರಾಗಿ ಸತ್ಪ್ರಜೆಯಾಗಿ ಬದುಕನ್ನ ಕಟ್ಟಿಕೊಳ್ಳಬೇಕು. ಇಂದಿನ ಮೊಬೈಲ್, ಸಾಮಾಜಿಕ ಜಾಲತಾಣದ ಪ್ರಭಾವಗಳಿಂದ ದೂರ ಉಳಿದು ತಮ್ಮ ಕಲಿಕೆಯನ್ನು ಅತ್ಯಂತ ವ್ಯವಸ್ಥಿತಗೊಳಿಸಿಕೊಂಡು ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು. ಸಮಾಜ ಬದಲಾಗಬೇಕು ಎಂದವರಿಗೆ ಗುರುಗಳು ದಾರಿದೀಪವಾಗುವುದರ ಮೂಲಕ ಸಮಾಜವನ್ನು ಎತ್ತುವ ಕಾಯಕದಲ್ಲಿ ತೊಡಗಬೇಕು ಎಂದು ನುಡಿದರು.ಪ್ರಾಚಾರ್ಯ ಡಾ. ಸದಾಶಿವಪ್ಪ ಎನ್. ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಎಂ.ಬಿ. ನಾಯಕ್, ಪ್ರೊ. ರಾಘವೇಂದ್ರ ಮಾಡಳ್ಳಿ, ಡಾ. ವಿಶ್ವನಾಥ ವ ಬೊಂದಾಡೆ, ಡಾ. ಹರೀಶ್ ಟಿ. ತಿರಕಪ್ಪ, ಪ್ರೊ. ದಿನೇಶ್ ಆರ್., ಡಾ. ಬಿ. ಎಸ್. ರುದ್ರೇಶ್, ಮಹೇಶ ಅಕ್ಕಿವಳ್ಳಿ, ಎಂ.ಎಂ. ನಿಂಗೋಜಿ., ಎಸ್.ಸಿ. ವಿರಕ್ತಮಠ, ಮಂಜುನಾಥ ಪರಸಿಕ್ಯಾತಿ, ಮಾಲತೇಶ್ ಜಡೆದ್, ಜಗದೀಶ್ ನಿಂಬಕ್ಕನವರ್ ಹಾಗೂ ಸಲಹಾ ಮಂಡಳಿಯ ಸದಸ್ಯರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಡಾ. ಪ್ರಕಾಶ್ ಜಿ.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೌಮ್ಯ ಎಸ್. ಸಿಂಗಣ್ಣನವರ್ ಪ್ರಾರ್ಥಿಸಿ, ಶ್ರೀದೇವಿ ಪಾನಂಗಲ್ ಸ್ವಾಗತಿಸಿದರು. ಸ್ವಾತಿ ಬೈಲಣ್ಣನವರ್ ಮತ್ತು ಸ್ಪೂರ್ತಿ ನಾಯಕ್ ನಿರೂಪಿಸಿ, ಸಂಗೀತ ಬೆಳವತ್ತಿ ವಂದಿಸಿದರು.