ನಾಡು ನುಡಿಯ ಅಭಿಮಾನ ಬೆಳೆಸಿಕೊಳ್ಳಿ

| Published : Dec 29 2023, 01:31 AM IST

ಸಾರಾಂಶ

ಹೊಸಕೋಟೆ: ಕರ್ನಾಟಕ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಜ್ಯ. ನಮ್ಮ ನಾಡು ನುಡಿ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ಕರ್ನಾಟಕ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಜ್ಯ. ನಮ್ಮ ನಾಡು ನುಡಿ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ದೇವನಗೊಂದಿ ಅನಿಲ ಘಟಕ ಐಒಸಿ ಟರ್ಮಿನಲ್ ನಲ್ಲಿ ಬೆಂಗಳೂರು ಪೆಟ್ರೋಲಿಯಂ ಚಾಲಕರು ಮತ್ತು ಸಹಾಯಕರ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆ ತನ್ನದೇ ಆದ ಮಹತ್ವ ಹಾಗೂ ಸ್ಥಾನಮಾನ ಹೊಂದಿದೆ. ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಚಾಲಕರು ಕೂಡ ಬೇರೆ ಬೇರೆ ರಾಜ್ಯಗಳಿಗೆ ತೆರಳಿದಾಗ ವ್ಯವಹಾರದ ದೃಷ್ಟಿಯಿಂದ ಅಲ್ಲಿನ ಭಾಷೆ ಮಾತನಾಡಬೇಕು. ಆದರೆ ಪ್ರಥಮ ಆದ್ಯತೆ ಕನ್ನಡಕ್ಕೆನೀಡಬೇಕು ಎಂದರು.

ಚಾಲಕರಿಗೆ ಆಸ್ಪತ್ರೆ ನಿರ್ಮಾಣ:

ದೇವನಗುಂದಿ ಬಳಿ ಐಒಸಿ, ಬಿಪಿಸಿಎಲ್, ಹೆಚ್‌ಪಿಸಿಎಲ್ ಕಂಪನಿಗಳು ಇರುವ ಹಿನ್ನೆಲೆಯಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬಂದು ಹೋಗುತ್ತವೆ. ಆದ್ದರಿಂದ ತುರ್ತು ಸಮಯದಲ್ಲಿ ಚಾಲಕರ ಚಿಕಿತ್ಸೆಗೆ ಅನುಕೂಲ ಆಗುವ ದೃಷ್ಠಿಯಿಂದ ವಾಗಟ ಗ್ರಾಮದ ಬಳಿ ಸುಮಾರು ಒಂದೂವರೆ ಎಕರೆ ಜಾಗವನ್ನು ಮೀಸಲಿರಿಸಿದ್ದು ಸಿಎಸ್‌ಆರ್ ಅನುದಾನ ದಕ್ಕಿದರೆ ಚಾಲಕರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗುವುದೆಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.

ಅನಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬೋಧನಹೊಸಹಳ್ಳಿ ಪ್ರಕಾಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮಾರೇಗೌಡ, ವಾಗಟ ನರೇಂದ್ರಪ್ಪ ಇತರರು ಹಾಜರಿದ್ದರು.

ಫೋಟೋ 27 ಹೆಚ್‌ಎಸ್‌ಕೆ 4

ಹೊಸಕೋಟೆ ತಾಲೂಕಿನ ದೇವನಗೊಂದಿ ಅನಿಲ ಘಟಕದ ಐಓಸಿ ಟರ್ಮಿನಲ್‌ನಲ್ಲಿ ಬೆಂಗಳೂರು ಪೆಟ್ರೋಲಿಯಂ ಚಾಲಕರು ಮತ್ತು ಸಹಾಯಕರ ಅಸೋಸಿಯೇಷನ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರನ್ನು ಅಭಿನಂದಿಸಲಾಯಿತು.