ಸಾರಾಂಶ
ಸೊರಬ ತಾಲೂಕಿನ ಕುಂದಗಸವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಲೆನಾಡು ಸಿರಿ ಸೇವಾ ಬಳಗದ ವತಿಯಿಂದ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಸೊರಬ
ಮನುಷ್ಯ ಗಳಿಸಿದ್ದರಲ್ಲಿ ಸ್ವಲ್ಪವನ್ನಾದರೂ ಸಮಾಜದ ಒಳಿತಿಗಾಗಿ ಮೀಸಲಿಟ್ಟರೆ ಬದುಕು ಸಾರ್ಥಕತೆ ಪಡೆಯುತ್ತದೆ ಮತ್ತು ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಆದ್ದ ರಿಂದ ಪ್ರತಿಯೊಬ್ಬರೂ ತನಗಾಗಿ ಎನ್ನುವುದನ್ನು ತೊರೆದು ಎಲ್ಲರಿಗಾಗಿ ನಾವು ಎನ್ನುವುದನ್ನು ರೂಢಿಸಿಕೊಳ್ಳಬೇಕು ಎಂದು ಮಲೆನಾಡು ಸಿರಿ ಸೇವಾ ಬಳಗ ಮತ್ತು ಶ್ರೀ ಗಣಾಧೀಶ್ವರ ಡ್ರೈವಿಂಗ್ ಸ್ಕೂಲ್ ಮುಖ್ಯಸ್ಥ ರಾಜು ಹಿರಿಯಾವಲಿ ಹೇಳಿದರು.ಶುಕ್ರವಾರ ತಾಲೂಕಿನ ಕುಂದಗಸವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳಿಗಾಗಿ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಸ್ವಾರ್ಥತೆಯೇ ಹೆಚ್ಚಾಗಿದ್ದು, ಎಲ್ಲರ ಒಳಿತನ್ನು ಬಯಸುವ ಬದಲು ತಮಗೆಷ್ಟು ಲಾಭ ಎನ್ನುವ ಚಿಂತನೆಗಳು ಹೆಚ್ಚು ದೊರೆಯುತ್ತವೆ. ಹಾಗಾಗಿ ಸಮಾಜದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿದರೆ ಸಮಾಜವೇ ತಮ್ಮನ್ನು ಗುರ್ತಿಸುತ್ತದೆ ಎಂದ ಅವರು, ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರು ಸ್ವಚ್ಛತೆಯತ್ತ ಹೆಚ್ಚು ಹೆಚ್ಚು ಗಮನ ಕೊಡಬೇಕು ಎಂದರು.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ನೋಪಿ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿನ ಉಳ್ಳವರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಗಮನಹರಿಸಲು ರಾಜು ಹಿರಿಯಾವಲಿ ಅಂತಹ ವ್ಯಕ್ತಿಗಳು ಪ್ರೇರಣೆಯಾಗಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ವೈ. ಗೌರಮ್ಮ, ಸಹ ಶಿಕ್ಷಕ ಅಶೋಕ್ ಪ್ರಮುಖರಾದ ಎಂ.ಹೆಚ್. ಗಣೇಶ್, ಸಂತೋಷ್, ಶ್ರೀಕಾಂತ್, ಸೃಜನ್ ಮೊದಲಾದವರು ಹಾಜರಿದ್ದರು.