ಸಾರಾಂಶ
ದೇಶಾದ್ಯಂತ ಗ್ರಾಹಕರಿಗೆ ಚಿನ್ನಾಭರಣ ಮಾರಾಟಗಾರಿಂದ ಅನ್ಯಾಯ
ರಾಮನಗರ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಚಿನ್ನಾಭರಣ ಪರಿಶುದ್ಧತೆ ಪ್ರಮಾಣಪತ್ರ ಒದಗಿಸಿಕೊಡಬೇಕು. ಇದರಿಂದ ಗ್ರಾಹಕರಿಗಾಗುವ ಅನ್ಯಾಯ ತಪ್ಪಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡಬೇಕು ಎಂದು ಚಿನ್ನಾಭರಣ ಮಾರಾಟಕ್ಕೆ ಸಂಬಂಧಿಸಿದಂತೆ ತಮಗೆ ಆಗಿದ್ದ ಅನ್ಯಾಯವನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಶ್ನಿಸಿ ನ್ಯಾಯ ಪಡೆದುಕೊಂಡ ರಾಜೇಂದ್ರ ಪ್ರಸಾದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಹಕರಿಗೆ ಚಿನ್ನಾಭರಣ ಮಾರಾಟಗಾರಿಂದ ಪರಿಶುದ್ಧತೆ ಹೆಸರಿನಲ್ಲಿ ದೇಶಾದ್ಯಂತ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ, ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಹೇಳಿದರು.ಗ್ರಾಹಕರು ಚಿನ್ನಾಭರಣ ಖರೀದಿ ಹಾಗೂ ಮಾರಾಟ ಮಾಡುವ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಅಧಿಕತ ಬಿಲ್‌ಗಳಲ್ಲಿ ವ್ಯವಹಾರ ನಡೆಸಬೇಕು. ಇಲ್ಲವಾದರೆ ಮೋಸ ಹೋಗಿ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಳೆಯ ಚಿನ್ನ ಖರೀಯ ನೆಪದಲ್ಲಿ ಚಿನ್ನಾಭರಣ ಮಳಿಗೆಯವರು ಬಿಳಿ ಚೀಟಿಯ ಮೇಲೆ ಬರೆದುಕೊಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರ ಬದಲಿಗೆ ಅಧಿಕೃತವಾಗಿ ಬಿಲ್ ಪಡೆಯಬೇಕು. ಇಲ್ಲವಾದರೆ ಚಿನ್ನದ ಮೌಲ್ಯಕ್ಕೆ ತಕ್ಕಂತೆ ಹಣ ನೀಡದೆ ವಂಚಿಸುತ್ತಾರೆ ಎಂದು ತಿಳಿಸಿದರು.ಕನಕಪುರದ ಚಿನ್ನದ ಮಳಿಗೆಯೊಂದರಲ್ಲಿ ಚಿನ್ನ ಮಾರಾಟ ಮಾಡಿದ ನಂತರ ವೇಸ್ಟೇಜ್, ತಾಮ್ರ, ಕೊಳೆ ಎಂದು ಕಳೆದು ಚಿನ್ನದ ಮೌಲ್ಯಕ್ಕೆ ತಕ್ಕಷ್ಟು ಹಣ ನೀಡದೆ ವಂಚಿಸಿದ್ದರು. ಇದನ್ನು ಪ್ರಶ್ನಿಸಿ ಗ್ರಾಹಕರ ನ್ಯಾಯಾಲಯಕ್ಕೆ ತೆರಳಿದ್ದೆ, ಸುಮಾರು 6 ತಿಂಗಳಕಾಲ ನಡೆದ ವಾದದಲ್ಲಿ ಕೊನೆಯದಾಗಿ ನ್ಯಾಯಾಲಯ ತಮ್ಮ ಪರವಾಗಿ ತೀರ್ಪು ನೀಡಿತು ಎಂದು ರಾಜೇಂದ್ರ ಪ್ರಸಾದ್ ನ್ಯಾಯ ಪಡೆದ ಬಗೆ ವಿವರಿಸಿದರು.