ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯುವಕರು ಶಿಕ್ಷಣದ ಜೊತೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಹೇಳಿದರು.ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯದ ವತಿಯಿಂದ 8ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ವಾರ್ಷಿಕ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದು ಯುವಕರು ಕೇವಲ ಅಂಕ ಪಟ್ಟಿಯನ್ನು ಪಡೆದು ಉದ್ಯೋಗ ಪಡೆಯಲು ಹಂಬಲಿಸುತ್ತಿದ್ದಾರೆ. ಆದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅಗತ್ಯ ಸಂಸ್ಕಾರ ಸಂಸ್ಕೃತಿ ಪಡೆಯುವಲ್ಲಿ ವಿಫಲರಾಗಿದ್ದಾರೆ.ಹಾಗಾಗಿ ಇಂತಹ ಗ್ರಾಮಾಂತರ ಭಾಗದಲ್ಲಿ ನಡೆಯಲಿರುವ ಶಿಬಿರಗಳಲ್ಲಿ ಪಾಲ್ಗೊಂಡು ಹಳ್ಳಿಗಾಡಿನ ಬದುಕು ಅವರ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಯಲು ಪ್ರಯತ್ನಿಸಬೇಕು. ಇದರಿಂದ ಮುಂದೆ ಯುವಕರು ಉತ್ತಮ ನಾಯಕತ್ವ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಗ್ರಾಮ ನೈರ್ಮಲ್ಯ ಸ್ವಚ್ಛತೆ ಆರೋಗ್ಯ ಇವುಗಳ ಬಗ್ಗೆ ಅರಿವು ಪಡೆದು ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸಬೇಕೆಂದರು. ಇಂದು ಸೇವಾ ಮನೋಭಾವನೆ ಕಷ್ಟ ಸುಖಗಳಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗಿದ್ದು ಇಂತಹ ಶಿಬಿರಗಳು ಯುವಕರು ಪರಿಪೂರ್ಣ ವ್ಯಕ್ತಿತ್ವ ಪಡೆದುಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿವಿ ಕುಲಪತಿ ಪ್ರೊ.ಎಂ ಆರ್ ಗಂಗಾಧರ್ ಮಾತನಾಡಿ, ಹಿಂದುಳಿದ ಜಿಲ್ಲೆಯ ಯುವಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಕೋರ್ಸ್ ಗಳನ್ನು ಆರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ನಿರುದ್ಯೋಗ ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ಕೌಶಲ್ಯ ಇಂದು ಯುವಕರಿಗೆ ಅಗತ್ಯವಾಗಿದ್ದು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮಾಂತರ ಪ್ರದೇಶಗಳ ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಯುವಕರು ನಗರ ವಾಸಿಗಳಾಗುತ್ತಿದ್ದು ಹಳ್ಳಿಗಾಡಿನ ಬದುಕು ಬವಣೆಗಳನ್ನು ಅರಿವಲ್ಲಿ ವಿಫಲರಾಗುತ್ತಿದ್ದಾರೆ ಹಾಗಾಗಿ ಗಾಂಧಿ ಕನಸಿನ ಶಿಬಿರಗಳು ಯುವಕರಲ್ಲಿ ಅರಿವು ಮೂಡಿಸುವಲ್ಲಿ ಸಹಾಯಕವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ.ವಿ.ಜಿ.ಸಿದ್ದರಾಜು, ವಕೀಲ ಅರುಣ್ ಕುಮಾರ್, ಸರ್ಕಾರಿ ಪ್ರೌಢಶಾಲೆಯ ಬಸವರಾಜು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಮಹೇಶ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರಸ್ವಾಮಿ, ಗೌಡಿಕೆ ಎ.ಸಿ. ಬಸವಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಎಸ್ ಬಸವಣ್ಣ, ಮಂಗಳಮ್ಮ ನೀಲಮ್ಮ ಪ್ರಾಧ್ಯಾಪಕ ಗುರುರಾಜ್, ಮುನಿಸ್ವಾಮಿ, ಗೋವಿಂದೇಗೌಡ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್, ಶಿವಯ್ಯ ಸೇರಿದಂತೆ ಗ್ರಾಮಸ್ಥರು ಯುವಕರು ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.