ಸಹನೆ, ಸಾಮರಸ್ಯ ರೂಢಿಸಿಕೊಳ್ಳಿ: ಲಿಂಗರಾಜ್‌

| Published : Feb 08 2024, 01:34 AM IST

ಸಾರಾಂಶ

ಸಹನೆ, ಪ್ರೀತಿ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು.

ಬಳ್ಳಾರಿ: ನಗರದ ಸರ್ಕಾರಿ ಮಾಜಿ ಪುರಸಭೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ವಿದ್ಯಾರ್ಥಿಗಳಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಶೆಟ್ರ ಗುರುಶಾಂತಪ್ಪ ಪದವಿಪೂರ್ವ ಕಾಲೇಜಿನ(ಎಸ್‌ಜಿ) ಉಪನ್ಯಾಸಕ ಟಿ.ಎಂ. ಲಿಂಗರಾಜ್ ಅವರು, ಸಹನೆ, ಪ್ರೀತಿ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಗಾಂಧೀಜಿಯವರ ತತ್ವ, ಸಿದ್ಧಾಂತಗಳನ್ನು ಬದುಕಿನಲ್ಲಿ ಪಾಲಿಸಬೇಕು. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ನೆಮ್ಮದಿಯ ಬದುಕು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಅವರು, ಮಹಾತ್ಮ ಗಾಂಧೀಜಿಯವರು ತಮ್ಮ ಇಡೀ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮೀಸಲಿಟ್ಟಿದ್ದರು. ಬಾಲ್ಯದಿಂದಲೇ ಸರಳತೆ, ಸೌಹಾರ್ದತೆಯ ಮನೋಭಾವ ಮೈಗೂಡಿಸಿಕೊಂಡಿದ್ದರು. ಸತ್ಯವನ್ನು ಪ್ರತಿಪಾದನೆ ಅವರ ಮೂಲ ಮಂತ್ರವಾಗಿತ್ತು. ಹೀಗಾಗಿಯೇ ಅವರು ಮಹಾತ್ಮ ಎನಿಸಿಕೊಂಡರು ಎಂದರು.

ಮುಖ್ಯ ಅತಿಥಿಗಳಾಗಿ ವಾರ್ಡಾ ಕಾಲೇಜಿನ ಉಪನ್ಯಾಸಕ ಕೆ.ಎಂ. ಶಂಭುನಾಥ, ಕೆ.ಪಿ. ಮಂಜುನಾಥ್ ರೆಡ್ಡಿ, ಸರ್ವೋತ್ತಮ ಕುಲಕರ್ಣಿ, ವಿ. ಮಂಜುಳಾ, ಡಾ. ಸಿದ್ಧೇಶ್ವರಿ, ಸಿ.ಬಿ. ಲಕ್ಷ್ಮಿಪವನಕುಮಾರ್, ಸಿ.ಬಿ. ಪುರದ್ ಉಪಸ್ಥಿತರಿದ್ದರು. ಕಾಲೇಜಿನ ಹಿರಿಯ ಉಪನ್ಯಾಸಕ ಜಿ. ಮಧುಸೂದನ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ನಾಗಿರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ತೀಕ್ ಮರಿಸ್ವಾಮಿಮಠ ಹಾಗೂ ಮಹಿಪತಿ ಕಾರ್ಯಕ್ರಮ ನಿರ್ವಹಿಸಿದರು.