ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಾಗುವಳಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ, ಕಾನೂನು ಗಾಳಿಗೆ ತೂರಿ ಬೇರೆಯವರ ಹೆಸರಿಗೆ ನೋಂದಣಿ ಮಾಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಬಳೇಹತ್ತಿಗುಪ್ಪೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಜಮೀನು ಸರ್ವೇಗೆ ಆಗಮಿಸಿದಾಗ ಸರ್ವೇಯರ್ ಅನ್ನು ತಡೆದ ಗ್ರಾಮಸ್ಥರು, ಶಾನುಭೋಗ ಎಸ್.ಎಲ್.ರಾಮಕೃಷ್ಣಯ್ಯ ಮತ್ತವರ ಮಕ್ಕಳು ಗ್ರಾಮದ ಚನ್ನಪ್ಪ ಬಿನ್ ಕುಂಟಲಿಂಗಪ್ಪ ಅವರಿಗೆ ಸೇರಿದ 3.10 ಎಕರೆ ಸಾಗುವಳಿ ಜಮೀನನ್ನು ತನ್ನ ಹೆಸರಿಗೆ ಆರ್‌ಟಿಸಿ ಮಾಡಿಕೊಂಡು ಸುಂಕಾತೊಣ್ಣೂರಿನ ದೇವರಾಜು ಬಿನ್ ರಾಮೇಗೌಡ ಅವರಿಗೆ ನೋಂದಣಿ ಮಾಡಿಸಿದ್ದಾರೆ ಎಂದು ದೂರಿದರು.
ಈ ಹಿಂದೆ ನಿವೇಶನಕ್ಕಾಗಿ 20 ಗುಂಟೆ ಕಳೆದಿರುವುದನ್ನೂ ಸೇರಿಸಿ ಒಟ್ಟು 3.10 ಎಕರೆ ಸಾಗುವಳಿ ಜಮೀನನ್ನು ಶಾನುಭೋಗ ಎಸ್.ಎಲ್.ರಾಮಕೃಷ್ಣಯ್ಯ ಈ ಹಿಂದೆ ಇನಾಮು ವಸೂಲಿ ಮಾಡುವ ವೇಳೆ ಸಾಗುವಳಿ ಇಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಆರ್‌ಟಿಸಿ ಮಾಡಿಸಿಕೊಂಡಿದ್ದಾರೆ. ಅವರು ಹಾಗೂ ಅವರ ಮಕ್ಕಳು ಇದೀಗ ಸುಂಕಾತೊಣ್ಣೂರು ದೇವರಾಜು ಗೆ ಕದ್ದು ಮುಚ್ಚಿ ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.ಕಳೆದ 70 ವರ್ಷಗಳಿಂದಲೂ ಸಾಗುವಳಿ ಜಮೀನು ಚನ್ನಪ್ಪ ಬಿನ್ ಕುಂಟಲಿಂಗಪ್ಪ ಅವರ ಅನುಭವದಲ್ಲಿದೆ. ಬಳಿಕ ಚನ್ನಪ್ಪ ಅವರು ಪೌತಿಯಾಗಿದ್ದು, ಇದೀಗ ಈ ಜಮೀನು ಪುತ್ರರಾದ ಲಿಂಗಪ್ಪ ಹಾಗೂ ನಾಗರಾಜು ಅವರಿಗೆ ಸೇರಬೇಕಿದೆ. ಜತೆಗೆ ಜಮೀನು ವ್ಯಾಜ್ಯ ಉಚ್ಚ ನ್ಯಾಯಾಲಯದಲ್ಲಿದ್ದರೂ ಏಕಾಏಕಿ ಶಾನುಭೋಗ ಎಸ್.ಎಲ್.ರಾಮಕೃಷ್ಣಯ್ಯ ಮತ್ತು ಅವರ ಮಕ್ಕಳು ದೇವರಾಜು ಅವರಿಗೆ ನೋಂದಣಿ ಮಾಡಿಸಿದ್ದಾರೆ. ಹೀಗಾಗಿ ತಾಲೂಕು ಹಾಗೂ ಜಿಲ್ಲಾಡಳಿತ ಚನ್ನಪ್ಪ ಬಿನ್ ಕುಂಟಲಿಂಗಪ್ಪ ಅವರ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಬಳಿಕ ತಾಲೂಕು ಕಚೇರಿಗೆ ತೆರಳಿ ಅಲ್ಲಿ ಕೆಲ ಕಾಲ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಸಂತೋಷ್ ಹಾಗೂ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಬಳೇಅತ್ತಿಗುಪ್ಪೆ ಪ್ರಕಾಶ್ (ರೇವಣ್ಣ), ಮುಖಂಡರಾದ ಕೈಲಾಸ್, ಮಹದೇವು, ನಾಗಮ್ಮ, ಮಹದೇವಮ್ಮ, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.