ಸಾಂಸ್ಕೃತಿಕ ಚಟುವಟಿಕೆ ವಿದ್ಯಾರ್ಥಿಗಳಿಗೆ ಮುಖ್ಯ

| Published : Aug 11 2024, 01:41 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿವೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಉತ್ತಮವಾಗಲಿದ್ದು, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಇಂದು ಅತ್ಯವಶ್ಯವಾಗಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿವೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಉತ್ತಮವಾಗಲಿದ್ದು, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಇಂದು ಅತ್ಯವಶ್ಯವಾಗಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ನಗರದ ಬಿಜಾಪುರ ಸೈನಿಕ ಶಾಲೆಯಲ್ಲಿ ನಡೆದ -2024ರ ಪ್ರತಿಷ್ಠಿತ ಅಖಿಲ ಭಾರತ ಸೈನಿಕ ಶಾಲೆಗಳ ಆಂತರಿಕ ಜಿ-ಗುಂಪಿನ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಜಾಪುರ ಸೈನಿಕ ಶಾಲೆಯಲ್ಲಿ ಇಂದು ಪ್ರತಿಷ್ಠಿತ ಅಖಿಲ ಭಾರತ ಸೈನಿಕ ಶಾಲೆಗಳ ಆಂತರಿಕ ಜಿ-ಗುಂಪಿನ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲಾ ಸ್ಪರ್ಧಾಳುಗಳನ್ನು ಕಂಡು ಸಂತೋಷವಾಗಿದೆ. ಮನುಷ್ಯನ ಬೆಳವಣಿಗೆಗೆ ಕ್ರೀಡೆಗಳು ಬಹುಮುಖ್ಯವಾಗಿದ್ದು, ದೈಹಿಕವಾಗಿ ಹಾಗೂ ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತವೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಹಾಗೂ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದರು.

ಅಲ್ಲದೇ, ವಿವಿಧ ಸೈನಿಕ ಶಾಲೆಗಳಿಂದ ಆಗಮಿಸಿರುವ ಎಲ್ಲಾ ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ. ವಿದ್ಯಾರ್ಥಿಗಳು ಇಂದು ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬರುತ್ತಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸೈನಿಕ ಶಾಲೆಯ ಪ್ರಾಂಶುಪಾಲೆ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಭಿಷ್ಟ, ಉಪ-ಪ್ರಾಚಾರ್ಯೆ ಕಮಾಂಡರ್ ಮೀನಾಕುಮಾರಿ, ಹಿರಿಯ ಮಾಸ್ಟರ್ ಪಿ.ಎಂ.ಶೆಟ್ಟಿ, ಸೈನಿಕ ಶಾಲೆಯ ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿವರ್ಗ, ಶಾಲೆಯ ಎನ್.ಸಿ.ಸಿ. ಸಿಬ್ಬಂದಿವರ್ಗ, ತಂಡದ ವ್ಯವಸ್ಥಾಪಕರು, ತರಬೇತಿದಾರರು, ಪಂದ್ಯಾವಳಿ ಸಂಘಟನಾ ಮುಖ್ಯಸ್ಥರು, ಸರ್ವ ಸದಸ್ಯರು, ನಿರ್ಣಾಯಕರು, ತಾಂತ್ರಿಕ ಸಿಬ್ಬಂದಿಗಳು, ಬಿಜಾಪುರ ಸೈನಿಕ ಶಾಲೆಯ ಆವರಣದಲ್ಲಿರುವ ಶಿಶುನಿಕೇತನ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.

--------------------------------------------

ಕೋಟ್‌

ಸೈನಿಕ ಶಾಲೆಗಳ ಆಂತರಿಕ ಕ್ರೀಡಾಕೂಟ ನಡೆಯುತ್ತಿರುವುದು ಸಂತಸದ ವಿಚಾರ. ಪಾಲಕರು ತಮ್ಮ ಮಕ್ಕಳಿಗೆ ಕೇವಲ ಓದಿಗೆ ಮಾತ್ರ ಒತ್ತಡ ಹೇರದೆ ಕ್ರೀಡೆಗಳಲ್ಲಿ ಬೆಳೆಯಲು ಬಿಡಬೇಕು. ಬೆಳೆಯುವ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಸಿಕ್ಕಾಗ ಅವರಲ್ಲಿನ ಪ್ರತಿಭೆ ಹೊರಬರಲು ಸಾಧ್ಯ. ಪ್ರತಿಯೊಬ್ಬ ಮಗುವಿನಲ್ಲೂ ಒಂದೊಂದು ಆಸಕ್ತಿ ಇರುತ್ತದೆ, ಅದನ್ನು ಅರಿತು ಪಾಲಕರು ಹಾಗೂ ಶಾಲೆಯವರು ಪ್ರೋತ್ಸಾಹಿಸಿದರೆ ಕ್ರೀಡೆಗಳಲ್ಲೂ ಸಾಧನೆ ಮಾಡಲು ಸಾಧ್ಯ.

- ಟಿ.ಭೂಬಾಲನ್, ಜಿಲ್ಲಾಧಿಕಾರಿ.

------------------------------

ಬಾಕ್ಸ್‌

ದೇಶದ ವಿವಿಧ ಸೈನಿಕ ಶಾಲೆಗಳು ಭಾಗಿ

ಅಖಿಲ ಭಾರತ ಸೈನಿಕ ಶಾಲೆಗಳ ಆಂತರಿಕ ಜಿ-ಗುಂಪಿನ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಶಾಲೆಗಳಾದ ವಿಜಯಪುರ ಸೈನಿಕ ಶಾಲೆ, ಬೆಳಗಾವಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಮಹಾರಾಷ್ಟ್ರದ ಚಂದ್ರಾಪುರ ಸೈನಿಕ ಶಾಲೆ, ಸತಾರ ಸೈನಿಕ ಶಾಲೆ, ಅಹಮದ್ ನಗರ ಪಿಡಿವಿಪಿ ಸೈನಿಕ ಶಾಲೆ, ಸಾಂಗಲಿ ಎಸ್.ಕೆ.ಇಂಟರ್‌ ನ್ಯಾಷನಲ್‌ ಸೈನಿಕ ಶಾಲೆ, ಗುಜರಾತನ ಬಾಲಾಚಡಿ ಸೈನಿಕ ಶಾಲೆ, ಜುನಾಗಡ ಬ್ರಹ್ಮಾನಂದ ವಿದ್ಯಾಮಂದಿರ ಸೈನಿಕ ಶಾಲೆ, ಮೆಹಸಾನ ಮೋತಿಬಾಯಿ ಆರ್.ಚೌದ್ರಿ ಸಾಗರ ಸೈನಿಕ ಶಾಲೆ, ಸಿಲವಾಸಾ ನೇತಾಜಿ ಸುಭಾಷ್ ಚಂದ್ರ ಬೋಸ್ ಮಿಲಿಟರಿ ಅಕಾಡೆಮಿ ಸೈನಿಕ ಶಾಲೆ ಹಾಗೂ ವಿವಿಧ ಕ್ರೀಡಾಪಟುಗಳು ಭಾಗವಹಿಸಿದ್ದರು.----------