ಸಂಡೂರು ಉತ್ಸವದಲ್ಲಿ ಸಾಂಸ್ಕೃತಿಕ ಕಲೆ ಅನಾವರಣ

| Published : Jan 27 2024, 01:16 AM IST

ಸಂಡೂರು ಉತ್ಸವದಲ್ಲಿ ಸಾಂಸ್ಕೃತಿಕ ಕಲೆ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕುಮಾರಸ್ವಾಮಿ ದೇವಸ್ಥಾನದ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು

ಸಂಡೂರು: ಪಟ್ಟಣದಲ್ಲಿ ಶುಕ್ರವಾರ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಸಂಡೂರು ಉತ್ಸವದ ಭವ್ಯ ಮೆರವಣಿಗೆಯಲ್ಲಿ ನಾಡಿನ ವಿವಿಧ ಕಲೆಗಳ ಅನಾವರಣವಾಯಿತು. ತಾಲೂಕು ಕಚೇರಿಯಿಂದ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢಶಾಲೆಯವರೆಗೆ ನಡೆದ ಕಲಾ ತಂಡಗಳ ಮೆರವಣಿಗೆಗೆ ಶಾಸಕ ಈ. ತುಕಾರಾಂ ಅವರು ಚಾಲನೆ ನೀಡಿದರು. ಸಂಡೂರಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕುಮಾರಸ್ವಾಮಿ ದೇವಸ್ಥಾನದ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು. ಹಗಲುವೇಷ, ವೀರಗಾಸೆ, ಲಂಬಾಣಿ ನೃತ್ಯ, ಹುಲಿವೇಷ, ಮಹಿಳಾ ಉರುಮೆ ವಾದ್ಯ, ತಾಶರಾಂ ಡೋಲ್, ಡೊಳ್ಳು ಕುಣಿತ, ಮಹಿಳಾ ಡೊಳ್ಳು ಕುಣಿತ, ಕೋಲಾಟ, ನಂದಿಧ್ವಜ ಕುಣಿತ, ಮರಗಾಲು ಕುಣಿತ, ಗೊರವರ ಕುಣಿತ, ಚೌಡಿಕೆ ಗೊಂದಳಿ, ತಮಟೆ ವಾದ್ಯ ತಂಡಗಳ ಕಲಾವಿದರು ಪ್ರದರ್ಶಿಸಿದ ಕಲೆಗಳು ಜನರನ್ನು ಆಕರ್ಷಿಸಿದವು. ಕೃಷಿ ಇಲಾಖೆಯಿಂದ ಇಲಾಖೆಯ ಯೋಜನೆಗಳನ್ನು ಬಿಂಬಿಸಲಾಯಿತು. ಹಲವು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆ ತಾಲೂಕು ಕಚೇರಿಯಿಂದ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢಶಾಲೆಯವರೆಗೆ ನಡೆಯಿತು. ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ತಾಲೂಕು ಪಂಚಾಯಿತಿ ಇಒ ಎಚ್. ಷಡಾಕ್ಷರಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಬಿ. ಮಹೇಶ್‌ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಪುರಸಭೆ ಮುಖ್ಯಾಧಿಕಾರಿ ಕೆ. ಜಯಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹನುಮಪ್ಪ ನಾಯಕ, ವಲಯ ಅರಣ್ಯಾಧಿಕಾರಿಗಳಾದ ದಾದಾ ಖಲಂದರ್, ಗಿರೀಶ್‌ಕುಮಾರ್, ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಎಳೆ ನಾಗಪ್ಪ, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮುಂತಾದ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.