ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಮರಲಿಂಗನದೊಡ್ಡಿ ಗ್ರಾಮದ ಶ್ರೀ ಮಾಧವ ವಿದ್ಯಾಲಯದಲ್ಲಿ ಮಂಗಳವಾರ ಸಂಜೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ ಎಲ್ಲರನ್ನೂ ರಂಜಿಸಿತು.‘ಓ ಚಿಟ್ಟೆ ಬಣ್ಣದ ಚಿಟ್ಟೆ’, ‘ಆಡೋಣ ಬಾ ಮುರಾರಿ’, ‘ಚೆಲ್ಲಿದರೂ ಮಲ್ಲೀಗೆಯಾ’, ‘ಕೋಲು ಕೋಲಣ್ಣ ಕೋಲು ಕೋಲೆ’ ಸೇರಿದಂತೆ ಹಲವಾರು ಹಾಡುಗಳಿಗೆ ಮಕ್ಕಳು ಆಕರ್ಷಕವಾಗಿ ನೃತ್ಯ ಮಾಡುವುದರೊಂದಿಗೆ ಪ್ರೇಕ್ಷಕರು ಬೆರಗಾಗುವಂತೆ ಮಾಡಿದರು.
ಶ್ರೀ ಮಾಧವ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಸಾಂಸ್ಕೃತಿಕ ಕ್ರೀಡೋತ್ಸವ ಆಯೋಜಿಸಲಾಗಿತ್ತು. ಅಲ್ಲಿ ಸ್ವಾಗತ, ಪ್ರಾಸ್ತಾವಿಕ ಮಾತುಗಳು, ಭಾಷಣಕ್ಕೆ ಪ್ರಾಧಾನ್ಯತೆ ಇರಲಿಲ್ಲ. ಇಡೀ ಕಾರ್ಯಕ್ರಮವನ್ನು ಮಕ್ಕಳ ಸಾಂಸ್ಕೃತಿಕ- ಕ್ರೀಡೋತ್ಸವಕ್ಕೆ ಮೀಸಲಿಡಲಾಗಿತ್ತು. ಮಕ್ಕಳ ನೃತ್ಯಕ್ಕೆ ಬಣ್ಣ ಬಣ್ಣದ ವಿದ್ಯುದ್ದೀಪಗಳು ಮೆರುಗು ನೀಡಿದ್ದವು.ಶಾಲೆಯ ವಿಶಾಲವಾದ ಆವರಣದಲ್ಲಿ ತೆರೆದ ವೇದಿಕೆಯನ್ನು ನಿರ್ಮಿಸಲಾಗಿತ್ತು. ಎರಡೂ ಬದಿಯಲ್ಲಿ ಮೆಟ್ಟಿಲುಗಳ ಮಾದರಿಯಲ್ಲಿ ಪ್ರೇಕ್ಷಕರು ಕುಳಿತು ವೀಕ್ಷಿಸಲು ಅನುಕೂಲ ಕಲ್ಪಿಸಿಕೊಡಲಾಗಿತ್ತು. ಮಧ್ಯಭಾಗದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು
ನಡೆಯುವಂತೆ ವ್ಯವಸ್ಥೆ ಮಾಡಿದ್ದರು.ವಿದ್ಯಾಭಾರತಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಮಾಧವ ವಿದ್ಯಾಲಯವನ್ನು ನಡೆಸಲಾಗುತ್ತಿದ್ದು, ಆರಂಭದಲ್ಲಿ ಸ್ವಾಗತ ಗೀತೆಯನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಆನಂತರ ಪಥಸಂಚಲನ ಕಾರ್ಯಕ್ರಮ ನಡೆಯಿತು.
ನಂತರ ಒಂದರಿಂದ ಮೂರನೇ ತರಗತಿಯ ಪುಟಾಣಿ ಮಕ್ಕಳು ‘ಓ ಚಿಟ್ಟೆ ಬಣ್ಣದ ಚಿಟ್ಟೆ, ಬಾ ಚಿಟ್ಟೆ ಬಣ್ಣದ ಚಿಟ್ಟೆ’ ಎಂಬ ಹಾಡಿಗೆ ನರ್ತಿಸಿದರು. ಶ್ವೇತವರ್ಣ ಬಟ್ಟೆ ಧರಿಸಿ ಚಿಟ್ಟೆಯಾಕಾರದ ಕಲಾಕೃತಿಯನ್ನು ಬೆನ್ನಿಗೇರಿಸಿಕೊಂಡು ನರ್ತಿಸಿದ್ದು ಮೋಹಕವಾಗಿತ್ತು.ನಂತರ ‘ಆಡೋಣ ಬಾ ಮುರಾರಿ’, ‘ಜಡೆ ಕೋಲಾಟ’ವನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ಆಕರ್ಷಕವಾಗಿ ಪ್ರದರ್ಶಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಹರ್ಷಿತಾ ಅವರು ಸ್ವಾಮಿ ವಿವೇಕಾನಂದರ ವೇಷ ಧರಿಸಿ ಅಮೆರಿಕಾದಲ್ಲಿ ಅವರು ಮಾಡಿದ ಭಾಷಣವನ್ನು
ಪ್ರಸ್ತುತಪಡಿಸಿದರು.ಪುಟಾಣಿ ಮಕ್ಕಳಿಂದ ಹಿಡಿದು ಪ್ರೌಢಶಾಲೆಯ ಮಕ್ಕಳವರೆಗೂ ಸುಮಾರು 20ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಮಲ್ಲಕಂಬ ಪ್ರದರ್ಶಿಸಿದರು. ಮೈನವಿರೇಳಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಮಲ್ಲಕಂಬ ಕಲೆ ಪ್ರದರ್ಶಿಸಿದ್ದನ್ನು ಕಂಡು ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದರು.
ಆನಂತರ ಉರಿಯುವ ಬೆಂಕಿಯ ನಡುವೆ ಜಿಗಿಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಎಂ.ಆರ್.ಪ್ರೀತಂ ಹಾಗೂ ಕೆ.ಎಸ್.ಪ್ರೀತಂ ಅವರನ್ನು ಗಣ್ಯರು ಅಭಿನಂದಿಸಿದರು.ವಿವೇಕ ಬೆಳೆಸುವುದೇ ನಿಜವಾದ ಶಿಕ್ಷಣ: ಮಂಗೇಶ್ ಭೇಂಡೆ
ಕನ್ನಡಪ್ರಭ ವಾರ್ತೆ ಮಂಡ್ಯಮಕ್ಕಳಲ್ಲಿ ವಿವೇಕ ಬೆಳೆಸುವುದೇ ನಿಜವಾದ ಶಿಕ್ಷಣ. ವಿವೇಕವಿಲ್ಲದೆ ಕಲಿಯುವುದು ಸಾಕ್ಷರತೆ ಮಾತ್ರ. ಶಿಕ್ಷಣ ಜೀವನದ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಹೇಳಿದರು.
ತಾಲೂಕಿನ ಮರಲಿಂಗನದೊಡ್ಡಿಯ ಶ್ರೀ ಮಾಧವ ವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಸಾಕ್ಷರರು ಹೆಚ್ಚಾದಂತೆ ಅವರು ರಾಕ್ಷಸರಾಗುತ್ತಿದ್ದಾರೆ. ಮಾನವೀಯ ಗುಣಗಳನ್ನು ಅವರಲ್ಲಿ ಕಾಣಲಾಗುವುದಿಲ್ಲ. ಜೀವನಮೌಲ್ಯದ ಆಧಾರದ ಮೇಲೆ ಬದುಕುವ ಶಿಕ್ಷಣ ಸಿಕ್ಕಾಗ ಮಾತ್ರ ವಿದ್ಯೆ ಸಾರ್ಥಕತೆ ಪಡೆಯುತ್ತದೆ ಎಂದು ತಿಳಿಸಿದರು.ಶಿಕ್ಷಣ ಮನುಷ್ಯನಲ್ಲಿ ಉದಾತ್ತ ಗುಣಗಳನ್ನು ನಿರ್ಮಾಣ ಮಾಡುತ್ತದೆ. ಸಮಾಜದಲ್ಲಿ ಮನುಷ್ಯ ಯಾವ ರೀತಿ ಬದುಕನ್ನು ಸಾಗಿಸಬೇಕು ಎನ್ನುವುದನ್ನು ಕಲಿಸುತ್ತದೆ. ಅಂತಹ ಸಂಸ್ಕಾರವಂತ ಶಿಕ್ಷಣವನ್ನು ನೀಡಿದಾಗ ಮಕ್ಕಳು ಸುಸಂಸ್ಕೃತ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಇದರಿಂದ ನಾಡು- ರಾಷ್ಟ್ರ ಬೆಳವಣಿಗೆಯನ್ನು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಮಕ್ಕಳೇ ಮುಂದಿನ ಭಾರತದ ಭವಿಷ್ಯ. ಹಾಗಾಗಿ ಸಮಾಜ ಮತ್ತು ದೇಶಕ್ಕೆ ಆಸ್ತಿಯಾಗುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಮಾಜಕ್ಕೆ ದೃಷ್ಟಿ ಕೊಡುವ ಕೇಂದ್ರವಾಗಿ ವಿದ್ಯಾಲಯ ಬೆಳೆಯುವಂತೆ ಆಶಿಸಿದರು.ಕಾರ್ಯಕ್ರಮದಲ್ಲಿ ವಿಜಯ ಭಾರತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ವಾಮನ್‌ರಾವ್ ಬಾಪಟ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ, ಅನಿವಾಸಿ ಭಾರತೀಯ ಡಾ.ಜಯರಾಂ,
ಮೈಸೂರಿನ ಎಂಡಿ ಎಕ್ಸೆಲ್ ಸಾಪ್ಟ್ ನ ಅಧ್ಯಕ್ಷ ಸುಧನ್ವ ಧನಂಜಯ, ಹೃದ್ರೋಗ ತಜ್ಞ ಡಾ.ವಿಶ್ವನಾಥ ಕೀಡೆ, ಶ್ರೀಕಾಂತ್, ಡಾ.ಚಂದ್ರಶೇಖರ್ ಇತರರಿದ್ದರು.