ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕನ್ನಡ ಜನತೆಯ ಒಗ್ಗಟ್ಟು ಹಾಗೂ ಭಾಷೆಯ ಬೆಳವಣಿಗೆ ಮೂಲಕ ರಾಜ್ಯದ ಸಾಂಸ್ಕೃತಿಕ ಅಭಿವೃದ್ಧಿ ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕರಾದ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಐದು ಸಹಸ್ರ ಮಂದಿಯಿಂದ ಕನ್ನಡ ಕಂಠ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾರೂ ಮೂಲ ಭಾಷೆ ಕನ್ನಡವನ್ನು ಮರೆಯಬಾರದು. ಕನ್ನಡ ಭಾಷೆ ಮೂಲಕ ಇತರ ಭಾಷಿಕರನ್ನು ಒಂದಾಗಿಸಲು ಸಾಧ್ಯ ಎಂದು ಹೇಳಿದರು.ಕುಶಾಲನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸುವ ಭರವಸೆ ನೀಡಿದ ಅವರು ಅಪೂರ್ಣಗೊಂಡಿರುವ ಕಲಾಭವನಕ್ಕೆ ಸರ್ಕಾರ ಹೆಚ್ಚುವರಿಯಾಗಿ ಒಂದು ಕೋಟಿ ರು ಅನುದಾನ ಕಲ್ಪಿಸಿದೆ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಮಡಿಕೇರಿ ಕೇಂದ್ರದಲ್ಲಿ ಪರಿಷತ್ತು 60 ಸೆಂಟ್ ನಿವೇಶನ ಹೊಂದಿದ್ದು ಸದ್ಯದಲ್ಲಿಯೇ ಕನ್ನಡ ಭವನ ನಿರ್ಮಾಣಕ್ಕೆ ಚಿಂತನೆ ಹರಿಸಲಾಗಿದೆ ಎಂದರು.ಮಾಜಿ ಅಧ್ಯಕ್ಷ ಟಿ ಪಿ ರಮೇಶ್ ಮಾತನಾಡಿ ಕನ್ನಡ ಭಾಷೆಯ ಬಾವುಟವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶ ಕಾರ್ಯಕ್ರಮ ಹೊಂದಿದೆ ಎಂದರಲ್ಲದೆ ಭಾಷೆ ಕಳೆದುಹೋದಲ್ಲಿ ನಾಡು ಆತಂಕ ಎದುರಿಸಬೇಕಾಗುತ್ತದೆ ಎಂದರು. ಮುಂದಿನ ಪೀಳಿಗೆಗೆ ಕನ್ನಡದ ನಾಡು ನುಡಿ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾವಿರಾರು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಕನ್ನಡ ನಾಡಗೀತೆ, ರೈತ ಗೀತೆ ಮತ್ತು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತ ಗಾಯನ ನಡೆಯಿತು.
ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಕೆ ಎಸ್ ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಪ್ಪ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ ಪುರಸಭೆ ಮುಖ್ಯ ನಿರ್ವಹಣಾಧಿಕಾರಿ ಕೃಷ್ಣಪ್ರಸಾದ್, ಜಿಲ್ಲಾ ಗೌರವ ಕಾರ್ಯದರ್ಶಿ ಎಸ್ ಮುನೀರ್ ಅಹ್ಮದ್, ಕೋಶಾಧಿಕಾರಿ ರೇವತಿ ರಮೇಶ್ ,ತಾಲೂಕು ಗೌರವ ಕಾರ್ಯದರ್ಶಿಗಳಾದ ಎಸ್ ನಾಗರಾಜು ಟಿ ವಿ ಶೈಲಾ ತಾಲೂಕು ಕೋಶಾಧಿಕಾರಿ ಕೆ ವಿ ಉಮೇಶ್, ಬಿ ಸಿ ದಿನೇಶ್ ಮತ್ತಿತರರು ಇದ್ದರು.ಕುಶಾಲನಗರ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳು ನಾಗರಿಕರು ಪರಿಷತ್ ಜಿಲ್ಲಾ ತಾಲೂಕು ಹೋಬಳಿ ಘಟಕದ ಪದಾಧಿಕಾರಿಗಳು ಮತ್ತು ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಊ ಲಾ ನಾಗೇಶ್ ನಿರೂಪಿಸಿದರು . ನಾಗರಾಜು ಸ್ವಾಗತ, ಮಂಜುನಾಥ್ ವಂದಿಸಿದರು.