ಉಡುಪಿಯ ಕಿನ್ನಿಮುಲ್ಕಿಯ ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ 18ನೇ ಪರ್ಯಾಯ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ, ನೆರವು, ಸೌಲಭ್ಯಗಳ ವಿತರಣೆ ಜ.17ರಂದು ಕಿನ್ನಿಮುಲ್ಕಿ ಜಂಕ್ಷನ್ ಬಳಿಯ ಭವ್ಯ ವೇದಿಕೆಯಲ್ಲಿ ಸಂಪನ್ನಗೊಳ್ಳಲಿದೆ.

ಉಡುಪಿ: ನಗರದ ಕಿನ್ನಿಮುಲ್ಕಿಯ ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ 18ನೇ ಪರ್ಯಾಯ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ, ನೆರವು, ಸೌಲಭ್ಯಗಳ ವಿತರಣೆ ಜ.17ರಂದು ಕಿನ್ನಿಮುಲ್ಕಿ ಜಂಕ್ಷನ್ ಬಳಿಯ ಭವ್ಯ ವೇದಿಕೆಯಲ್ಲಿ ಸಂಪನ್ನಗೊಳ್ಳಲಿದೆ. ಈ ಬಗ್ಗೆ ಕಾರ್ಯಕ್ರಮದ ರೂವಾರಿ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಸಂಜೆ 7 ಗಂಟೆಗೆ ಕಾರ್ಯಕ್ರಮವನ್ನು ಸ್ವೀಕರ್ ಯು.ಟಿ.ಖಾದರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ.ಕೃಷ್ಣ ಪ್ರಸಾದ್ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ 160ಕ್ಕೂ ಅಧಿಕ ಅಂಗನವಾಡಿಗಳಿಗೆ ಕುಕ್ಕರ್ ವಿತರಣೆ, 100 ಶಾಲೆಗಳಿಗೆ ಫ್ಯಾನ್ ವಿತರಣೆ, 100 ಸ್ಪೋರ್ಟ್ಸ್ ಕಿಟ್ ವಿತರಣೆ, ಅಂಗನವಾಡಿಗಳಿಗೆ ಖುರ್ಚಿ ವಿತರಣೆ, ಆರೋಗ್ಯ ನಿಧಿ ವಿತರಣೆ, ರಿಕ್ಷಾ ಚಾಲಕರಿಗೆ ಇನ್ಸೂರೆನ್ಸ್ ಪಾಲಿಸಿ ವಿತರಣೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವನ್ನು ಕ್ರಮವಾಗಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಎಂಎಲ್‌ಸಿ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಆಂಧ್ರದ ವೈಎಸ್‌ಆರ್‌ಸಿಪಿ ಪಕ್ಷದ ರಾಜ್ಯ ವಕ್ತಾರ ಗಂಟಾ ನರಹರಿ ವಿತರಣೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ಹಿರಿಯ ವೈದ್ಯ ಡಾ.ಜಿ.ಎಸ್. ಚಂದ್ರಶೇಖರ್, ಪ್ರಮುಖರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲ, ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು. ರಾತ್ರಿ 9 ಗಂಟೆಯಿಂದ ಖ್ಯಾತ ಗಿಟಾರ್ ವಾದಕ ರಾಜ್ ಗೋಪಾಲ್ ನೇತೃತ್ವದಲ್ಲಿ ಸರಿಗಮಪ, ಎದೆತುಂಬಿ ಹಾಡುವೆನು ರಿಯಾಲಿಟಿ ಶೋ ಗಾಯಕರ ಹಾಗೂ ಚಲನಚಿತ್ರ ನಟನಟಿಯರಾದ ಕೃತಿ ಬಿ. ಶೆಟ್ಟಿ, ಕಾಜಲ್ ಕುಂದರ್, ಶೈನ್ ಶೆಟ್ಟಿ ಸಮ್ಮಿಲನದೊಂದಿಗೆ ಅದ್ದೂರಿಯ ರಸಮಂಜರಿ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಶ್ರೀಕೃಷ್ಣ ಗ್ರೂಪ್ ಡ್ಯಾನ್ಸ್ ಸದಸ್ಯ ಪ್ರಶಾಂತ ಆಚಾರ್ಯ, ಹರೀಶ್ ಉಪಸ್ಥಿತರಿದ್ದರು.