ಜನಪದ ಸಾಹಿತ್ಯ ಉಳಿವಿಗೆ ಸಾಂಸ್ಕೃತಿಕ ಮತ್ತು ಜನಪದ ಸಂಘಗಳ ಪಾತ್ರ ಹಿರಿದಾಗಿದೆ
ಯಲಬುರ್ಗಾ: ಗ್ರಾಮೀಣ ಕಲೆ ಉಳಿಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರ ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮ್ಯಾದನೇರಿಯ ಶ್ರೀ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಕಲಾಸಂಘದಿಂದ ಆಯೋಜಿಸಿದ್ದ ಮನದುಂಬಿ ಹಾಡುವೆನು ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜನಪದ ಸಾಹಿತ್ಯ ಉಳಿವಿಗೆ ಸಾಂಸ್ಕೃತಿಕ ಮತ್ತು ಜನಪದ ಸಂಘಗಳ ಪಾತ್ರ ಹಿರಿದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಪಾಲಕರು ತಮ್ಮಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ಕಲಿಸುವ ಜತೆಗೆ ಸಂಗೀತದಲ್ಲಿ ಆಸಕ್ತಿ ಮೂಡಿಸಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾ ಸಮಿತಿ ಅಧ್ಯಕ್ಷ ಸುಭಾಷ ಜಿರ್ಲಿ ಮಾತನಾಡಿ, ಆಧುನಿಕ ಕಾಲದ ಮೊಬೈಲ್ ಯುಗದಲ್ಲಿ ಮೂಲ ಜನಪದ ಕಲೆ ಮಾಯವಾಗುತ್ತಿದೆ. ಜನಪದ ಕಲಾವಿದರು ಮತ್ತು ಹಾಡುಗಳು ಮರೆಮಾಚುತ್ತಿವೆ. ಇಂತಹ ಕಲಾವಿದರನ್ನು ಮುಖ್ಯವಾಹಿನಿಗೆ ಕರೆತರಲು ಇಂತಹ ವೇದಿಕೆ ಬಹಳ ಅವಶ್ಯಕ ಇರುತ್ತದೆ ಎಂದರು.ಈ ಸಂದರ್ಭ ಶ್ರೀ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಸಂಘದ ಸಂಸ್ಥಾಪಕ ಡಿ.ಎಸ್. ಪೂಜಾರ, ದೇವಸ್ಥಾನ ಸಮಿತಿ ವ್ಯವಸ್ಥಾಪಕ ಕೆ. ಚಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬಾಲಪ್ಪ ಕುರಿ, ಪ್ರಮುಖರಾದ ಮಹಾಲಿಂಗಪ್ಪ ಗುಡದೂರು, ರವೀಂದ್ರಗೌಡ್ರು, ಕಲಾವಿದರಾದ ಸುಭಾಸಚಂದ್ರ ಲಿಂಗದಹಳ್ಳಿ, ವೀರೇಶ ಚಿರತನಾಳ, ಈಶಪ್ಪ ಜಿರ್ಲಿ, ಅಶ್ವಿನಿ, ಮಲ್ಲಿಕಾರ್ಜುನ ಚಿರತನಾಳ, ದೇವರಾಜ ಗಿಣಗೇರಿ, ಹನುಮಂತಕುಮಾರ ಲಿಂಗನಬಂಡಿ, ಬಸಪ್ಪ ತಿಮ್ಮನಗೌಡ್ರು, ಹೊಳಿಯಪ್ಪ ಕುಷ್ಟಗಿ, ಮಂಜುನಾಥ ಕಟ್ಟಿಮನಿ, ಹನುಮೇಶ ಸಾಲಭಾವಿ, ಹನುಮೇಶ ಹೊಸೂರ, ಹುಸೇನಪ್ಪ ಭರತಗಿ, ಹನುಮೇಶ ಕೆ. ಮಲ್ಲಾಪುರ, ಪಂಪಣ್ಣ ಗಡ್ಡಿ, ಗ್ಯಾನೇಶ ಬಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಂಜು ವಾಲ್ಮೀಕಿ, ಗಫೂರ್‌ಅಲಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.