ಸಾರಾಂಶ
ಹೊಸಪೇಟೆ: ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಹೇಳಿದರು.ಕಮಲಾಪುರ ಪಟ್ಟಣದಲ್ಲಿ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ತಾಲೂಕು ಕಸಾಪ ನೆಲಮಂಗಲ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಸಂಯುಕ್ತವಾಗಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವಿ, ಕಲಾವಿದರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಪೀಳಿಗೆಗೆ ಕನ್ನಡ ಸಂಸ್ಕೃತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಶೀಲರಾಗಬೇಕು ಎಂದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಜ್ಯದ ಅಧ್ಯಕ್ಷ ಮಣ್ಣಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಹಂಪಿಯಲ್ಲಿ ಕಲ್ಲಿನ ರಥ ನಮ್ಮದು, ಕನ್ನಡ ಪಥ ಹಾಗೂ ಚಿಗುರು ಕವನ ಸಂಕಲನ ಮತ್ತು ಸಾಧನೆಗೆ ಸಾಲು ಸಾಲು ಮೆಟ್ಟಿಲುಗಳು ಎನ್ನುವ ಮೂರು ಕೃತಿಗಳನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.
ಚುಟುಕು ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಿ.ಡಿ. ಮುತಾಲಿಕ್ ದೇಸಾಯಿ, ಜಿಲ್ಲಾಧ್ಯಕ್ಷ ಎಲ್ ಹಾಲ್ಯಾನಾಯ್ಕ, ಕೆ.ಎಂ. ರೇಖಾ ಪ್ರಕಾಶ್, ರಾಘವೇಂದ್ರ ಆಚಾರ್ ಚಂದ್ರಶೇಖರಯ್ಯ ರೋಣದ ಮಠ ಮತ್ತಿತರರಿದ್ದರು.ಮಕ್ಕಳ ಗೋಷ್ಠಿ, ಯುವ ಘೋಷ್ಠಿ, ಮಹಿಳಾ ಗೋಷ್ಠಿ, ಮತ್ತು ವಿಚಾರ ಸಂಕಿರಣ ಹಾಗೂ ಕವಿ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಶ್ವೇತಾ ನಾಗರಾಜ ಅವರ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.