ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುವಿದ್ಯಾರ್ಥಿಗಳ ಪರಿಪೂರ್ಣವಾದ ವ್ಯಕ್ತಿತ್ವ ವಿಕಸನಕ್ಕೆ ಬರೀ ವಿದ್ಯಾಭ್ಯಾಸ ಒಂದೇ ಸಾಲದು ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆಗಳು ಸಹ ಪೂರಕವಾದವು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಸಲುವಾಗಿ ಕಾಲೇಜಿಗೆ ಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕಳೆದ ಬಾರಿ ವಿದ್ಯಾರ್ಥಿಗಳು ಕ್ಯಾಂಟೀನ್ ಸೌಲಭ್ಯವನ್ನು ಕಲ್ಪಿಸುವಂತೆ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಬೇಡಿಕೆಯಂತೆ ಈಗ ಕ್ಯಾಂಟೀನ್ ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಅಥವಾ ಕಂದಾಯ ಇಲಾಖೆಯ ಜಾಗವನ್ನು ಕಾಲೇಜಿಗೆ ಹಸ್ತಾಂತರಿಸಿ ಸುಸಜ್ಜಿತ ಆಟದ ಮೈದಾನವನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆ ನೀಡಿ, ಮೊಬೈಲ್ ಬಳಕೆಯಿಂದ ದೂರವಿದ್ದು ಆಸಕ್ತಿಯಿಂದ ವ್ಯಾಸಂಗದಲ್ಲಿ ತೊಡಗಿಕೊಳ್ಳಬೇಕು, ನಿಮ್ಮ ತಂದೆ ತಾಯಿಯ ಮಾತನ್ನು ತಳ್ಳಿ ಹಾಕದೆ ಅವರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು, ಅಲ್ಲದೆ ದುಶ್ಚಟಗಳಿಂದ ದೂರವಿದ್ದು, ಪ್ರತಿದಿನ ಕ್ರೀಡೆಯಲ್ಲಿ ತೊಡಗಿ ಕೊಳ್ಳಬೇಕು, ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಿ ಎಂದು ಕಿವಿಮಾತು ಹೇಳಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಕಾಲೇಜಿನ ಪ್ರಾಂಶುಪಾಲ ಕೆಂಪೇಗೌಡ, ಪ್ರಾಧ್ಯಾಪಕರಾದ ಶೋಭಾ, ಅಪ್ಪಗೆರೆ ತಿಮ್ಮರಾಜು, ಕೃಷ್ಣೆಗೌಡ, ಹೇಮಲತಾ, ಕರುಣೇಶ್ ಕುಮಾರ್ ಇದ್ದರು.