ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜು.18 ರಂದು ನಡೆಯಲಿರುವ ಭೋವಿ ಜನೋತ್ಸವವು ಕೇವಲ ಒಂದು ಆಚರಣೆಯಾಗದೇ, ಭೋವಿ, ವಡ್ಡರ ಜನರ ಸಾಂಸ್ಕೃತಿಕ ಬದುಕನ್ನು ಬಿಂಬಿಸುವ ಮತ್ತು ಎತ್ತಿಹಿಡಿಯುವ ಪ್ರಮುಖ ಉತ್ಸವವಾಗಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಭೋವಿ ಜನೋತ್ಸವ ಆಚರಣೆ ಹಿನ್ನಲೆ ಚಿತ್ರದುರ್ಗ ನಗರದ ಹೂರ ವಲಯದ ಭೋವಿ ಗುರುಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರಸ್ತುತ ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಮತ್ತು ಅನಕ್ಷರತೆ ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದರೆ, ಈ ಪರಿಸ್ಥಿತಿಯನ್ನು ಹೀಗೆಯೇ ಮುಂದುವರಿಯಲು ಬಿಡಬಾರದು ಎಂದರು.

ಮುಂಬರುವ ದಿನಗಳಲ್ಲಿ ಸಮುದಾಯದಲ್ಲಿರುವ ಅನಕ್ಷರತೆಯನ್ನು ಸಂಪೂರ್ಣವಾಗಿ ತೊಲಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಸಕಾರಾತ್ಮಕ ಪ್ರಕ್ರಿಯೆ ಮತ್ತು ಯೋಜನೆಗಳಿಗೆ ಸಮಾಜದ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು. ಜಾತಿ ನಮ್ಮ ಶಕ್ತಿಯಾಗಿದೆ, ಜಾತಿ ಬಲವಾದಷ್ಟು ಅದರಲ್ಲಿ ಜನತೆ ಬಲಿಷ್ಠರಾಗುತ್ತಾರೆ. ಬಲಿಷ್ಠರಾದವರು ಬೇರೆಯವರನ್ನು ಬಲಿಷ್ಠರನ್ನಾಗಿ ಮಾಡಿದಾಗ ಸಮಾಜ ಮತ್ತಷ್ಟು ಬಲಿಷ್ಠವಾಗುತ್ತದೆ. ನಮ್ಮ ಹಿರಿಯರು ಹಾಕಿ ಕೊಟ್ಟ ದಾರಿ ಇಂದು ನಮಗೆ ಮಾರ್ಗದರ್ಶನವಾಗಿದೆ ಎಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.

ಸಮಾಜದ ಮುಖಂಡ ಹಾಗೂ ದೇವರಾಜ ಅರಸು ವಿದ್ಯಾ ಸಂಸ್ಥೆಯ ಸಿಇಒ ರಘುಚಂದನ್ ಮಾತನಾಡಿ, ನಮ್ಮ ಸಮುದಾಯಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದ ಯಾವುದೇ ರಾಜಕೀಯ ಪಕ್ಷದವರು ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರ ಅನುಭವ ನನಗೆ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ನನಗೆ ಅಂತಿಮವಾಗಿ ಟಿಕೆಟ್ ನಿರ್ಧಾರವಾಗಿತ್ತು ಆದರೆ ನಮ್ಮ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಅದರಲ್ಲೂ ಒಗ್ಗಟ್ಟಾಗಿ ಇಲ್ಲ ಎನ್ನುವ ಕಾರಣಕ್ಕೆ ಟಿಕೆಟ್ ಕೈ ತಪ್ಪಿದೆ. ಸಮುದಾಯ ಒಟ್ಟಾಗಿ ಇದ್ದಾಗ ಮಾತ್ರ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಿದೆ ಎಂದರು.


ಶಿಕ್ಷಣವೇ ನಮ್ಮ ಸಮಾಜದ ಶಕ್ತಿಯಾಗಬೇಕಿದೆ. ಮಕ್ಕಳಿಗೆ 18 ವರ್ಷದವರೆಗೆ ಶಿಕ್ಷಣವನ್ನು ನೀಡಬೇಕು. ನಂತರ ಅವರಿಗೆ ಶಕ್ತಿಯನ್ನು ತುಂಬುವ ಕಾರ್ಯವನ್ನು ಸಮಾಜ ಪೋಷಕರು ಮಾಡಬೇಕಿದೆ. ಇತ್ತೀಚಿನ ದಿನಮಾನದಲ್ಲಿ ಎಸ್‌ಸಿ ಸಮುದಾಯ ಎಂದರೆ ಬರೀ ಮಾದಿಗ ಸಮುದಾಯ ಎಂದು ಬಿಂಬಿಸಲಾಗುತ್ತಿದೆ. ಇದು ಹೋಗಬೇಕು ನಾವು ಸಹಾ ಸಂಘಟಿತರಾಗಿದ್ದೇವೆ ಎಂದು ತೋರಿಸಬೇಕಿದೆ ಎಂದು ರಘುಚಂದನ್ ಹೇಳಿದರು.

ಓಸಿಸಿ ರಾಜ್ಯಾಧ್ಯಕ್ಷದ ಆನಂದಪ್ಪ, ಆಡಳಿತಾಧಿಕಾರಿ ಗೌನಳ್ಳಿ ಗೋವಿಂದಪ್ಪ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಈ ಮಂಜುನಾಥ್, ಸದಸ್ಯರಾದ ಕಾಳಘಟ್ಟ ಹನುಮಂತಪ್ಪ, ಅಂಜನೇಯ, ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಸೂರೇನಹಳ್ಳಿ, ನಿಕಟ ಪೂರ್ವ ಅಧ್ಯಕ್ಷ ತಿಪ್ಪೇಸ್ವಾಮಿ, ತಿಮ್ಮಣ್ಣ, ನಿರಂಜನ, ಸಿದ್ದು ಬಂಡಿ, ರಾಮು, ರವಿಪೂಜಾರ್, ತಿಪ್ಪಣ್ಣ ಒಡೆಯರ್, ಜಯ್ಯಪ್ಪ, ರಾಮಾಂಜನೇಯ, ಕೊಲ್ಲಭೋವಿ, ಪರಶುರಾಮ್, ಗುರಪ್ಪ, ಶಿವರುದ್ರಪ್ಪ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭೋವಿ ಸಮುದಾಯ ಮುಖಂಡರು ಭಾಗವಹಿಸಿದ್ದರು.