ಎಳ್ಳಾರೆ ಮುಲ್ಕಾಡು ಶಾಲೆಯಲ್ಲಿ ಸಂಸ್ಕೃತಿ, ಪರಿಸರ ಜಾಗೃತಿ

| Published : Aug 05 2025, 11:47 PM IST

ಸಾರಾಂಶ

ಎಳ್ಳಾರೆ ಗ್ರಾಮದ ಮುಳ್ಕಾಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ‘ಆಟಿಡೊಂಜಿ ಜೋಕ್ಲೆನ ಕೂಟ’ ಕಾರ್ಯಕ್ರಮ ನೆರವೇರಿತು.

ಕಾರ್ಕಳ: ತುಳುನಾಡು ಸಂಸ್ಕೃತಿಗಳ ತವರೂರು ಎಂದೇ ಹೆಸರುವಾಸಿಯಾದ ಈ ನಾಡಿನಲ್ಲಿ, ಯಕ್ಷಗಾನ, ದೈವಾರಾಧನೆ, ನಾಗಾರಾಧನೆ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳು ನಾಶವಾಗುತ್ತಿರುವ ಈ ಕಾಲಘಟ್ಟದಲ್ಲಿ, ಹೊಸ ಪೀಳಿಗೆಗೆ ಈ ಪರಂಪರೆ ಪರಿಚಯಿಸಲು ‘ಆಟಿಡೊಂಜಿ ಜೋಕ್ಲೆನ ಕೂಟ’ ಕಾರ್ಯಕ್ರಮ ಸಹಕಾರಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭಾಸ್ಕರ್ ಟಿ. ಅಭಿಪ್ರಾಯಪಟ್ಟಿದ್ದಾರೆ.ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಮುಳ್ಕಾಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ‘ಆಟಿಡೊಂಜಿ ಜೋಕ್ಲೆನ ಕೂಟ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಇಂತಹ ಸಂಸ್ಕೃತಿಯ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸ್ವಚ್ಛ ಪರಿಸರವಿದ್ದಲ್ಲಿ ಸ್ವಚ್ಛ ಮನಸ್ಸು ಬೆಳೆದೀತು. ಈ ಕಾರ್ಯಕ್ರಮ ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿ ಹುಟ್ಟಿಸಿದೆ ಎಂದು ಅವರು ಎಂದು ಸಂತಸ ವ್ಯಕ್ತಪಡಿಸಿದರು.

ಉದ್ಯಮಿ ಕಮಲಾಕ್ಷ ಕಾಮತ್ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯೆ ಇಲ್ಲದವನು ಪಶು ಸಮಾನ. ವಿದ್ಯೆಯಿಂದ ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ತಂದೆತಾಯಿಯ ಗೌರವ ಮತ್ತು ವಿನಯಶೀಲತೆ ಮಕ್ಕಳಲ್ಲಿ ಬೆಳೆಬೇಕು ಎಂದು ಕಿವಿಮಾತು ಹೇಳಿದರು.ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಕಾರ್ಯಕ್ರಮದ ರೂವಾರಿ ಸತೀಶ್ ಪೂಜಾರಿ ಮುಳ್ಳಾಡು ಮಾತನಾಡಿ, ಸನಾತನ ಧರ್ಮದಲ್ಲಿ ಋಷಿ ಪರಂಪರೆ ಹಾಗೂ ಕೃಷಿ ಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಶಾಲೆಯ 62 ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೆಸರಿನಲ್ಲಿ 62 ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಜತೆ ಆಟಿ ತಿಂಗಳ ಹಿನ್ನಲೆಯಲ್ಲಿ ಮಕ್ಕಳಿಗೆ ಹಳೆಯ ಕಾಲದ ಕಷ್ಟದ ದಿನಗಳನ್ನು ಪರಿಚಯಿಸುವ ಪ್ರಯತ್ನವಾಗಿದೆ ಎಂದು ವಿವರಿಸಿದರು.ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದಿನೇಶ್ ಪೈ ಮುನಿಯಾಲು, ಕವಿತಾ ರಾಮಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾಶಿವ ಪ್ರಭು,ಉಡುಪಿ‌ ನಗರಸಭೆ ಸದಸ್ಯ ಸದಾನಂದ ಕುಲಾಲ್, ಜ್ಯೋತಿ ಹರೀಶ್, ಅರುಣ್ ಹೆಗ್ಡೆ, ಮಾಲತಿ ಕುಲಾಲ್, ವಿಶ್ವನಾಥ ನಾಯಕ್, ರವೀಂದ್ರ ಪ್ರಭು ಕಡ್ತಲ, ಅರಣ್ಯಾಧಿಕಾರಿ ಕರುಣಾಕರ ಜೆ‌ ಆಚಾರ್ಯ , ರವಿ ಪೂಜಾರಿ ಸಹಿತ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶಿಕ್ಷಕ ಸುಭಾಷ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಜನಾರ್ದನ ಬೆಳಿರಾಯ ಸ್ವಾಗತಿಸಿದರು. ಶಿಕ್ಷಕಿ ರೂಪಶ್ರಿ ಪ್ರಭು ಹಾಗೂ ಇತರ ಶಿಕ್ಷಕರು ಸಹಕರಿಸಿದರು.