ಸಂಸ್ಕೃತಿ ನಾಗರಿಕತೆಗಳ ಅಡಿಪಾಯವೇ ಜಾನಪದ: ಬಿ. ರಾಜಪ್ಪ

| Published : Aug 24 2024, 01:30 AM IST

ಸಾರಾಂಶ

ಅಜ್ಜಂಪುರ, ಸಂಸ್ಕೃತಿ, ನಾಗರಿಕತೆಯ ಅಡಿಪಾಯವೇ ಜಾನಪದ. ಈ ಪ್ರಪಂಚದಲ್ಲಿ ಪ್ರತಿಯೊಂದು ಆಚಾರ ವಿಚಾರ ಉಡುಪು, ಧರ್ಮ, ಕಲೆ ಸಾಹಿತ್ಯ, ಸಂಗೀತ, ಆಹಾರ ಪದ್ಧತಿ, ಜೀವನ ಶೈಲಿ ಮುಂತಾದವುಗಳೆಲ್ಲವೂ ಜಾನಪದ ಸಂಸ್ಕೃತಿಯ ಪ್ರಭಾವದಿಂದಲೇ ಉಗಮಗೊಂಡಿವೆ ಎಂದು ಜಾನಪದ ಸಾಹಿತಿ ಬಿ. ರಾಜಪ್ಪ ಅಭಿಪ್ರಾತಪಟ್ಟರು.

- ಚಿಕ್ಕಮಗಳೂರು ಜಿಲ್ಲಾ ಕಜಾಪದಿಂದ ಮುದಿಗೆರೆ ಗ್ರಾಮದಲ್ಲಿ ವಿಶ್ವ ಜಾನಪದ ದಿನಾಚರಣೆ

ಕನ್ನಡಪ್ರಭ ವಾರ್ತೆ ಅಜ್ಜಂಪುರ

ಸಂಸ್ಕೃತಿ, ನಾಗರಿಕತೆಯ ಅಡಿಪಾಯವೇ ಜಾನಪದ. ಈ ಪ್ರಪಂಚದಲ್ಲಿ ಪ್ರತಿಯೊಂದು ಆಚಾರ ವಿಚಾರ ಉಡುಪು, ಧರ್ಮ, ಕಲೆ ಸಾಹಿತ್ಯ, ಸಂಗೀತ, ಆಹಾರ ಪದ್ಧತಿ, ಜೀವನ ಶೈಲಿ ಮುಂತಾದವುಗಳೆಲ್ಲವೂ ಜಾನಪದ ಸಂಸ್ಕೃತಿಯ ಪ್ರಭಾವದಿಂದಲೇ ಉಗಮಗೊಂಡಿವೆ ಎಂದು ಜಾನಪದ ಸಾಹಿತಿ ಬಿ. ರಾಜಪ್ಪ ಅಭಿಪ್ರಾತಪಟ್ಟರು.

ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ಮತ್ತು ಅಜ್ಜಂಪುರ ತಾಲೂಕು ಘಟಕದಿಂದ ಮುದಿಗೆರೆ ಗ್ರಾಮದಲ್ಲಿ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಈ ದಿನ ಜಗತ್ತಿನ ಜನಪದ ಸಮುದಾಯಗಳಿಗೂ, ವಿದ್ವಾಂಸರಿಗೂ ಒಂದು ಅವಿಸ್ಮರಣೀಯ ದಿನ ಎಂದರು.

ವಿಲಿಯಂ ಜಾನ್ ಟಾಮ್ಸ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ 1846 ಆ. 22 ರಂದು ಬರೆದ ಪತ್ರದಲ್ಲಿ ಜನರ ಪರಂಪರೆಯ ಸಂಗತಿಗಳ ಅಧ್ಯಯನಕ್ಕೆ ಫೋಕ್ಲೋರ್ ಎಂದು ಕರೆಯಬಹುದೆಂದು ಸೂಚಿಸಿದ. ಫೋಕ್ ಅಂದರೆ ಜನ. ಲೋರ್ ಎಂದರೆ ಆ ಜನರ ಜ್ಞಾನ ಅಥವಾ ತಿಳುವಳಿಕೆ ಎಂದು ವಿವರಿಸಿದ್ದರಿಂದ ಮೊದಲ ಬಾರಿಗೆ ಫೋಕ್ಲೋರ್ ಎನ್ನುವ ಪದ ಬಳಕೆಗೆ ಬಂದಿತು. ಈ ಚಾರಿತ್ರಿಕ ದಿನವೇ ವಿಶ್ವ ಜಾನಪದ ದಿನವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ, ಜನಪದ ಸಂಸ್ಕೃತಿ, ಸಾಹಿತ್ಯ, ಸಂಗೀತ ಕಲೆ ಎಂದೆಂದಿಗೂ ಅಜರಾಮರವಾಗಿರುತ್ತದೆ. ಈ ಕಲೆಗೆ ಅಳಿವಿಲ್ಲ. ಆದರೆ ಪಾಶ್ಚಾತ್ಯ ಸಂಸ್ಕೃತಿ ದಾಳಿಯಿಂದ ಈ ಕಲೆ ಮುಂದುವರಿಕೆ ಕುಂಟಿತಗೊಂಡಿದೆ. ಹಾಗಾಗಿ ಈ ವಿಶ್ವ ಜಾನಪದ ಆಚರಣೆ ಮುಂದುವರಿಸುತ್ತಾ ಜನರಲ್ಲಿ ಜಾಗೃತಿ ಮೂಡಿಸಲು ನಾವೆಲ್ಲರೂ ಕಂಕಣ ಬದ್ಧರಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಮಾಳೇನಳ್ಳಿ ಬಸಪ್ಪ ಮಾತನಾಡಿ, ಹಿರಿಯರಾದ ನಾವು ಜಾನಪದ ಸಂಸ್ಕೃತಿಯ ಮೌಲ್ಯಾಧಾರಿತ ಅಂಶಗಳಾದ ಸತ್ಯ, ನಿಷ್ಠೆ, ಧರ್ಮ, ತಾಳ್ಮೆ ಸಹಕಾರ, ಪ್ರಾಮಾಣಿಕತೆ, ಹೊಂದಾಣಿಕೆ ಮನೋಭಾವವನ್ನು ಯುವ ಪೀಳಿಗೆಗೆ ಹೇಳಿಕೊಡಬೇಕಾಗಿದೆ ಎಂದು ತಿಳಿಸಿದರು.

ಜಾನಪದ ಕಲಾವಿದರಾದ ಹನುಮಂತಪ್ಪ, ಮಂಜಪ್ಪ, ಶಾಂತಮ್ಮ, ತಿಪ್ಪೇಶ, ಮುಂತಾದವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಕಡೂರು ತಾಲೂಕು ಘಟಕ ಅಧ್ಯಕ್ಷ ಜಗದೀಶ್ವರ ಆಚಾರಿ ಮತ್ತು ಸಾಹಿತಿ ಲೋಹಿತ್, ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಜಯಣ್ಣ, ಪರಮೇಶಪ್ಪ, ಮಲಿಯಪ್ಪ, ಚಿಕ್ಕನಲ್ಲೂರು ಪರಮೇಶ್, ತಿಪ್ಪೇಶ್, ಮುಂತಾದವರು ಉಪಸ್ಥಿತರಿದ್ದರು.

----

23ಕೆಕೆಡಿಯು2:

ಕಜಾಪದಿಂದ ಮುದಿಗೆರೆ ಗ್ರಾಮದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆಯಲ್ಲಿ ಜಾನಪದ ಕಲಾವಿದರನ್ನು ಗೌರವಿಸಲಾಯಿತು.