ಮಕ್ಕಳು ಬದುಕಲು ಬೇಕಾದ ಅಗತ್ಯವಿರುವ ಕಲೆ, ಕ್ರೀಡೆ, ಸಾಹಿತ್ಯ, ಪರಿಸರ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಿಸಬೇಕು. ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು.
ಗದಗ: ಮಕ್ಕಳ ಸರ್ವೋನ್ನತಿಗೆ ಸಂಸ್ಕೃತಿ, ಸಂಸ್ಕಾರದ ಜ್ಞಾನ ಸಹಕಾರಿ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ತಿಳಿಸಿದರು.
ನಗರದ ಬಸವ ಯೋಗ ಮಂದಿರದಲ್ಲಿ ಎಸ್‌ವೈಬಿಎಂಎಸ್ ಯೋಗ ಪಾಠಶಾಲೆ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ಬೇಸಿಗೆ ರಜೆ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ನಡೆದ ಸಂಸ್ಕೃತಿ, ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಒಬ್ಬ ರೈತ ತನ್ನ ಭೂಮಿಯಲ್ಲಿ ಬಿತ್ತಿದ ಬೀಜ ಫಲ ಕೊಡುವ ತನಕ ಬೇಕಾದ ಅಗತ್ಯತೆಗಳನ್ನು ಪೂರೈಸುತ್ತಾನೆ. ಆದರೆ ಪಾಲಕರಾದ ನಾವು ನಮ್ಮ ಮಕ್ಕಳ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸಲು ಅಸಮರ್ಥರಾಗಿದ್ದೇವೆ. ಇಂದು ಮಕ್ಕಳು ಬಯಸಿದ್ದನ್ನು ಕೊಡಿಸುತ್ತೇವೆ. ಅವರ ಭವಿಷ್ಯ ಜೀವನ ಬಗ್ಗೆ ಆಲೋಚಿಸುವುದಿಲ್ಲ. ಬಾಲ್ಯಾವಸ್ಥೆಯಿಂದಲೇ ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಸದೃಢರನ್ನಾಗಿಸಬೇಕು. ಅವರಿಗೆ ಬದುಕಲು ಬೇಕಾದ ಅಗತ್ಯವಿರುವ ಕಲೆ, ಕ್ರೀಡೆ, ಸಾಹಿತ್ಯ, ಪರಿಸರ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಿಸಬೇಕು. ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದರು.ತೋಂಟದಾರ್ಯ ಮಠದ ಜಾತ್ರೆ ಕೇವಲ ಜಾತ್ರೆಗೆ ಸೀಮಿತವಾಗಿರದೆ ಜಾತ್ರೆಯ ಅಂಗವಾಗಿ ದುಶ್ಚಟ ನಿವಾರಣೆಗಾಗಿ ಜಾಗೃತಿ ಪಾದಯಾತ್ರೆ, ಗ್ರಂಥ ಬಿಡುಗಡೆ, ಸನ್ಮಾನ ಕಾರ್ಯಕ್ರಮಗಳ ಜತೆಗೆ ಮಕ್ಕಳ ಜ್ಞಾನ ವೃದ್ಧಿಗಾಗಿ ಸಂಸ್ಕೃತಿ, ಸಂಸ್ಕಾರ ಶಿಬಿರವನ್ನು ಉಚಿತವಾಗಿ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಚೇತನ ಬಿ. ಅಂಗಡಿ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದಲ್ಲಿ ಹೊಸತನ ಕಲಿಯಬೇಕು, ಕಲಿತದ್ದನ್ನು ಜೀವನದುದ್ದಕ್ಕೂ ಪಾಲಿಸಬೇಕೆಂದರು.ಅಧ್ಯಕ್ಷತೆ ವಹಿಸಿದ ಡಿಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಮಾತನಾಡಿದರು. ಜಿ.ಪಿ. ಕಟ್ಟಿಮನಿ, ಅಶೋಕ ಬಾರಕೇರ, ಸುನಂದಾ ಜ್ಯಾನೋಪಂತರ ಸೇರಿದಂತೆ ಶಿಬಿರಾರ್ಥಿಗಳು ಇದ್ದರು. ಶಿಬಿರ ಸಂಯೋಜಕ ಕೆ. ಎಸ್. ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಂ. ಬುರಡಿ ಸ್ವಾಗತಿಸಿದರು. ವಿ.ಎಂ. ಮುಂದಿನಮನಿ ವಂದಿಸಿದರು.