ಸಾರಾಂಶ
ಕಲಾದಗಿ: ಬಾಲ್ಯದಲ್ಲಿ ಕಲಿತ ವಿದ್ಯೆ, ಬುದ್ದಿ, ಸಂಸ್ಕಾರ ಕೊನೆಗಾಲದವರೆ ಇರುತ್ತದೆ. ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಜಮಖಂಡಿ ತಾಲೂಕಿನ ಹುಲ್ಯಾಳದ ಸಿದ್ಧ ಓಂಕಾರ ಆಶ್ರಮದ ಪೂಜ್ಯ ಶರಣಿ ಶ್ರೀ ಜಯಶ್ರೀ ಅಮ್ಮನವರು ಹೇಳಿದರು
ಕನ್ನಡಪ್ರಭ ವಾರ್ತೆ ಕಲಾದಗಿ
ಬಾಲ್ಯದಲ್ಲಿ ಕಲಿತ ವಿದ್ಯೆ, ಬುದ್ದಿ, ಸಂಸ್ಕಾರ ಕೊನೆಗಾಲದವರೆ ಇರುತ್ತದೆ. ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಜಮಖಂಡಿ ತಾಲೂಕಿನ ಹುಲ್ಯಾಳದ ಸಿದ್ಧ ಓಂಕಾರ ಆಶ್ರಮದ ಪೂಜ್ಯ ಶರಣಿ ಶ್ರೀ ಜಯಶ್ರೀ ಅಮ್ಮನವರು ಹೇಳಿದರು.ಶಾರದಾಳ ಗ್ರಾಮದಲ್ಲಿ ಲಿಂ.ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ೨೭ನೇ ಜಾತ್ರಾಮಹೋತ್ಸದಲ್ಲಿ ಶ್ರೀ ಯಲ್ಲಾಲಿಂಗ ಮಹಾರಾಜರ ಚರಿತ್ರೆ ಪುರಾಣ ಪ್ರವಚನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ತಾವಾಗಿ ಕೆಡುವುದಿಲ್ಲ. ತಾಯಿ ಮಕ್ಕಳಿಗೆ ಸಂಸ್ಕಾರ ಕೊಡಲು ತಪ್ಪಿದಾಗ ಮಕ್ಕಳು ದಾರಿ ತಪ್ಪುತ್ತವೆ. ಶಿಕ್ಷಣ ಕೊಡುವುದು ಮುಖ್ಯವಲ್ಲ, ಅದರ ಜೊತೆ ಸಂಸ್ಕಾರ ಕೊಡುವುದು ಮುಖ್ಯ. ಜೀವನದಲ್ಲಿ ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯವಾಗುತ್ತದೆ ಎಂದು ನುಡಿದರು.
ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಮಕ್ಕಳು ಸಣ್ಣವರಾಗಿದ್ದಾಗಲೇ ಸಂಸ್ಕಾರ, ನಡೆ-ನುಡಿ, ವಿನಯ ವಿಧೇಯತೆ ಕಲಿಸಬೇಕು. ಅಮ್ಮಾ ಎಂಬ ಮಾತೆ ಮಂತ್ರ ಅದುವೇ ಪೂಜೆ ಪ್ರಾರ್ಥನೆ. ಶಿವನ ಜಪ ಮಾಡುವ ಮನೆ ಮನದಲ್ಲಿ ಶಾಂತಿ ನೆಮ್ಮದಿ ತುಂಬಿರುತ್ತದೆ. ಭಗವಂತ ಕೊಟ್ಟು ನೋಡುತ್ತಾನೆ, ಪರೀಕ್ಷಿಸಿ ನೋಡುತ್ತಾನೆ, ಕಸಿದುಕೊಂಡು ನೋಡುತ್ತಾನೆ. ನಮ್ಮಲ್ಲಿದ್ದಾಗ ದಾನ ಮಾಡಬೇಕು. ಹಸಿದು ಬಂದವರಿಗೆ ಒಂದು ತುತ್ತು ಅನ್ನ ಕೊಟ್ಟರೆ ಅ ಮನೆ ಉಕ್ಕಿ ಹರಿಯುತ್ತದೆ ಎಂದರು.ಸಿಂದಗಿಯ ಶ್ರೀ ಶರಣ ಮಡಿವಾಳ ಗವಾಯಿಗಳು ಸಂಗೀತ ಸೇವೆ ನೀಡಿದರು. ಸೊಲ್ಲಾಪುರದ ಶ್ರೀ ಕೃಷ್ಣಯ್ಯ ಪೂಜಾರಿ ತಬಲಾ ಸೇವೆ ನೀಡಿದರು. ಕಾರ್ಯಕ್ರಮದಲ್ಲಿ ನಿಂಗಪ್ಪ ಕೊಪ್ಪದ ಸ್ವಾಗತಿಸಿ, ನಿರೂಪಿಸಿದರು