ಪಂಚಮಸಾಲಿ ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ

| Published : Apr 14 2024, 01:50 AM IST

ಸಾರಾಂಶ

ಕೇಂದ್ರದ ಒಬಿಸಿ ಮೀಸಲಾತಿ ಪಂಚಮಸಾಲಿ ಸಮಾಜಕ್ಕೆ ದಕ್ಕಿದರೆ ಸಮಾಜ ಮುಂದುವರೆಯಲು ಸಾಧ್ಯ.

ಲಕ್ಷ್ಮೇಶ್ವರ: ಪಂಚಮಸಾಲಿ ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯವಾಗಿದೆ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.

ಪಟ್ಟಣದ ಎಪಿಎಂಸಿ ವರ್ತಕರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಂಚಮಸಾಲಿ ಸಮಾಜಕ್ಕೆ ಕೇವಲ ಒಂದೇ ಟಿಕೆಟ್ ನೀಡಿದ್ದು ಅನ್ಯಾಯ ಅಲ್ಲವೇ? ಎಂದು ಪ್ರಶ್ನಿಸಿದರು.

ಪಂಚಮಸಾಲಿ ಸಮಾಜದ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುತ್ತೇವೆ ಎಂದು ಹೇಳಿ 2ಡಿ ಮೀಸಲಾತಿ ನೀಡಿತು. ಅದು ಈಗ ಕೋರ್ಟ್ ನಲ್ಲಿದೆ. ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಪಂಚಮಸಾಲಿ ಸಮಾಜವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ನಂತರ ಅವರನ್ನು ಹಿಂದಕ್ಕೆ ಸರಿಸುವ ಕಾರ್ಯ ಮಾಡುತ್ತಿದೆ. ಅವರಿಗೆ ಯಾವುದೇ ಪ್ರಮುಖ ಸ್ಥಾನಮಾನ ನೀಡುವ ಕಾರ್ಯ ಮಾಡದೆ ಸೈಡ್‌ಲೈನ್ ಗೆ ಮಾಡುತ್ತಿದೆ. ಓಬಿಸಿ ಮೀಸಲಾತಿ ಸೌಲಭ್ಯ ನೀಡುವ ಪಕ್ಷ ಬೆಂಬಲಿಸುವ ನಿರ್ಧಾರ ಮಾಡುತ್ತೇವೆ ಎಂದರು.

ಕೇಂದ್ರದ ಒಬಿಸಿ ಮೀಸಲಾತಿ ಪಂಚಮಸಾಲಿ ಸಮಾಜಕ್ಕೆ ದಕ್ಕಿದರೆ ಸಮಾಜ ಮುಂದುವರೆಯಲು ಸಾಧ್ಯ. ಕೇಂದ್ರದ ಒಬಿಸಿ ನಿಲುವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡುವವರನ್ನು ಸಮಾಜದ ಮುಖಂಡರನ್ನು ಸೇರಿಸಿ ಲೋಕಸಭಾ ಚುನಾವಣೆಯಲ್ಲಿ ಯಾರನ್ನ ಬೆಂಬಲಿಸಬೇಕೆಂದು ನಿರ್ಧಾರಕ್ಕೆ ಬರುವ ಕಾರ್ಯ ಮಾಡುತ್ತೇವೆ. ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಇನ್ನೇಷ್ಟು ದಿನ ಸಹಿಸಿಕೊಳ್ಳುವುದು ಎಂದು ಪ್ರಶ್ನಿಸಿದರು.

ದಿಂಗಾಲೇಶ್ವರ ಶ್ರೀಗಳ ರಾಜಕೀಯ ಬಗ್ಗೆ ಮಾತನಾಡಿದ ವಚನಾನಂದ ಶ್ರೀಗಳು, ಉತ್ತರ ಭಾರತದಲ್ಲಿ ಸನ್ಯಾಸಿಗಳು, ಸಾಧು ಸಂತರು ರಾಜಕೀಯ ಶುದ್ಧೀಕರಣಕ್ಕಾಗಿ ರಾಜಕೀಯಕ್ಕೆ ಬರುವುದರಲ್ಲಿ ತಪ್ಪಿಲ್ಲ. ಅದೇ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ದಿಂಗಾಲೇಶ್ವರ ಶ್ರೀಗಳು ರಾಜಕೀಯ ಶುದ್ಧೀಕರಣಕ್ಕೆ ಬಂದಿದ್ದು ನಾವು ಸ್ವಾಗತಿಸುತ್ತೇವೆ ಎಂದರು.

ಈ ವೇಳೆ ಮಂಜುನಾಥ ಮಾಗಡಿ, ರಜನಿಕಾಂತ್ ದೇಸಾಯಿ, ಶಂಕರಪ್ಪ ದೊಡ್ಡಗೌಡ್ರ ಇದ್ದರು.