ಸಾರಾಂಶ
ಕೆ.ಎಂ.ಮಂಜುನಾಥ್
ಬಳ್ಳಾರಿ: ಲೋಕಸಭಾ ಚುನಾವಣೆಯ ಫಲಿತಾಂಶ ನಿರ್ಣಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಖಂಡ ಬಳ್ಳಾರಿ ಜಿಲ್ಲೆಯ "ಯುವ ಮತದಾರರು " (ಈ ಬಾರಿ ನೋಂದಣಿಯಾದವರು) ಯಾರ ಕಡೆ ವಾಲಲಿದ್ದಾರೆ ಎಂಬ ಕುತೂಹಲ ಮೂಡಿದೆ.ಬಳ್ಳಾರಿ ಲೋಕಸಭಾ ಕ್ಷೇತ್ರವು ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು ಹಾಗೂ ಕೂಡ್ಲಿಗಿ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವು ಮಾತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ.ಮತದಾರರ ಪಟ್ಟಿಯ ಪ್ರಕಾರ ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ 53,169 ಯುವ ಮತದಾರರು ನೋಂದಣಿಯಾಗಿದ್ದು, ಯುವ ಸಮುದಾಯ ನಿಲುವು-ನಿರ್ಧಾರಗಳೇನು ? ಎಂಬ ಕೌತುಕವಿದೆ.
ಯುವಕರ ಸೆಳೆಯಲು ಕಸರತ್ತು:ಮಹಿಳಾ ಮತಗಳನ್ನು ಹೆಚ್ಚು ನಂಬಿಕೊಂಡಿರುವ ಕಾಂಗ್ರೆಸ್, ಯುವ ಮತದಾರರು ಸಹ ಕೈ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂಬ ವಿಶ್ವಾಸದಲ್ಲಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಿರುದ್ಯೋಗ ಭತ್ಯೆ ನೀಡಲು "ಯುವನಿಧಿ " ಯೋಜನೆ ಆರಂಭಿಸಿರುವುದು ಕೈ ಅಭ್ಯರ್ಥಿಯನ್ನು ಯುವಕರು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ಪಕ್ಷದ ನಾಯಕರಲ್ಲಿದೆ. ಬಿಜೆಪಿ ಸಹ ಯುವಕರ ಮತಗಳ ಮೇಲೆ ಕಣ್ಣಿಟ್ಟಿದೆ.
ಯುವ ಸಮುದಾಯದ ನಡುವೆ ನರೇಂದ್ರ ಮೋದಿ ಅವರ ಕಾರ್ಯ ಸಾಧನೆಗಳನ್ನು ಬಿಂಬಿಸುವ ಮೂಲಕ ಯುವಕರ ಮತಗಳಿಗೆ ಗಾಳ ಹಾಕಿದೆ. ಯುವಕರನ್ನು ಸೆಳೆಯಲು ಎರಡು ರಾಷ್ಟ್ರೀಯ ಪಕ್ಷಗಳು ನಾನಾ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿವೆ.ಬಳ್ಳಾರಿ ನಗರದಲ್ಲಿ ಹೆಚ್ಚು:
ಅಖಂಡ ಬಳ್ಳಾರಿ ಜಿಲ್ಲೆಯ ಪೈಕಿ ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ಯುವ ಮತದಾರರಿದ್ದಾರೆ. ಹೊಸಪೇಟೆಯಲ್ಲಿ ಅತಿ ಕಡಿಮೆ ಮತದಾರರಿದ್ದಾರೆ. ಎರಡು ಜಿಲ್ಲೆಯ ಹೋಲಿಕೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಯುವ ಮತದಾರರು 30,197 ರಷ್ಟಿದ್ದು, ವಿಜಯನಗರ ಜಿಲ್ಲೆಯಲ್ಲಿ 22,972 ಯುವ ಮತದಾರರಿದ್ದಾರೆ.ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 7011, ಬಳ್ಳಾರಿ ಗ್ರಾಮೀಣ 7907, ಬಳ್ಳಾರಿ ನಗರ 7924, ಸಂಡೂರು 7355, ಹಡಗಲಿ 4539, ಹಗರಿಬೊಮ್ಮನಹಳ್ಳಿ 6830, ವಿಜಯನಗರ 5656 ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 5947 ಯುವ ಮತದಾರರು ನೋಂದಣಿಯಾಗಿದ್ದು, ಇದೇ ಮೊದಲ ಬಾರಿಗೆ ಹಕ್ಕು ಚಲಾಯಿಸಲಿದ್ದಾರೆ.
13 ಸಾವಿರಕ್ಕೂ ಹೆಚ್ಚು 85 ವರ್ಷ ಮೇಲ್ಪಟ್ಟ ಮತದಾರರು:ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 13,285 ಜನರು 85 ವರ್ಷ ಮೇಲ್ಪಟ್ಟ ವಯಸ್ಕ ಮತದಾರರಿದ್ದಾರೆ. ಈ ಪೈಕಿ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ1158, ಬಳ್ಳಾರಿ ಗ್ರಾಮೀಣ 1720, ಬಳ್ಳಾರಿ ನಗರ 2420, ಸಂಡೂರು 1355, ಹಡಗಲಿ 1218, ಹಗರಿಬೊಮ್ಮನಹಳ್ಳಿ 1393, ವಿಜಯನಗರ 2570 ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 1451 ಜನ ವಯಸ್ಕ ಮತದಾರರಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 24,841 ಅಂಗವಿಕಲ ಮತದಾರರಿದ್ದು, 268 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಈ ಬಾರಿ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದೇನೆ. ಹಕ್ಕು ಚಲಾಯಿಸಲು ಹೆಚ್ಚು ಉತ್ಸುಕಳಾಗಿದ್ದೇನೆ. ಯುವಕರು ತಪ್ಪದೇ ಮತದಾನ ಮಾಡಬೇಕು. ಈ ಮೂಲಕ ಪ್ರಜಾಸತ್ತೆ ಬಲಪಡಿಸಬೇಕು ಎನ್ನುತ್ತಾರೆ ಯುವ ಮತದಾರ ಅನನ್ಯ.