ವಿದ್ಯೆಯೊಂದಿಗೆ ಸಂಸ್ಕಾರ ಅತಿ ಮುಖ್ಯ: ಮಿಥುನ್‌ ಪಾಟೀಲ್‌

| Published : Jun 26 2024, 12:31 AM IST

ಸಾರಾಂಶ

ರೋಣ ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಸಭಾಂಗಣದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ವತಿಯಿಂದ ರೋಣ ಪಬ್ಲಿಕ್ ಸ್ಕೂಲ್ ನೂತನ ಶಾಲೆ ಪ್ರಾರಂಭೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ರೋಣ

ಮಗುವಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ, ಶಿಸ್ತು, ಸದ್ಗುಣ ಕಲಿಸುವುದು ಅತಿ ಮುಖ್ಯ. ಈ ದಿಸೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು ಎಂದು ಪುರಸಭೆ ಉಪಾಧ್ಯಕ್ಷ ಮಿಥುನ್ ಜಿ. ಪಾಟೀಲ ಹೇಳಿದರು.ಸೋಮವಾರ ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಸಭಾಂಗಣದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ವತಿಯಿಂದ ರೋಣ ಪಬ್ಲಿಕ್ ಸ್ಕೂಲ್ ನೂತನ ಶಾಲೆ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣವೇ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಬುನಾದಿಯಾಗಿದ್ದು, ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಪ್ರಸ್ತುತ ಸಾಕಷ್ಟು ಖಾಸಗಿ ಶಾಲೆಗಳಿವೆ, ಈ ಪೈಪೋಟಿಯ ಮಧ್ಯೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಕ್ಕಳ ಭವಿಷ್ಯ ಉಜ್ವಲವಾಗಬೇಕು. ಶೈಕ್ಷಣಿಕ ಪ್ರಗತಿಯಾಗಬೇಕು. ಶಾಲಾ ಪ್ರಾರಂಭದ ಉದ್ದೇಶ ಸಾಕಾರಗೊಳ್ಳಬೇಕು.‌ ಈ ದಿಸೆಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಶ್ರಮ, ಸಾರ್ವಜನಿಕ ಸಲಹೆ, ಸಹಕಾರ ಅತಿ ಮುಖ್ಯ ಎಂದರು.

ಹಜರತ್ ಸೈಯದ ಶಾವಲಿ ದರ್ಗಾದ ಅಜ್ಜನವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಬಾವಾಸಾಬ ಬೇಟಗೇರಿ ವಹಿಸಿ ಮಾತನಾಡಿದರು.

ಎ.ಎಸ್. ಖತೀಬ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ವಿತರಿಸಲಾಯಿತು. ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಬಸವರಾಜ ನವಲಗುಂದ, ಪುರಸಭೆ ಮಾಜಿ ಉಪಾಧ್ಯಕ್ಷ ಯೂಸೂಫ್‌ ಇಟಗಿ, ಮುನೀರ ಅಹ್ಮದ, ಆಯೂಬ್‌ಖಾನ್‌ ಹಾಸೀಮನವರ, ಮಲ್ಲಿಕ್ ಯಲಿಗಾರ, ಅಂದಪ್ಪ ಬಿಚ್ಚೂರ, ಅಬ್ದುಲ್ ರೆಹೆಮಾನ್ ಸೈಯದ, ಫಯಾಜ್‌ ಕಲಾದಗಿ, ಪುರಸಭೆ ಸದಸ್ಯ ಅಮೀನ್ ಅಹ್ಮದ ತಹಶಿಲ್ದಾರ, ಇನಾಯತ್ ತರಪದಾರ, ಸಿಖಂದರಸಾಬ ಜಾನಖಾನ, ಮಲ್ಲಿಕಸಾಬ ಕುರ್ತಕೋಟಿ‌, ಡಾ. ಮಹಮ್ಮದಸಾಬ ಸೈಯದ, ಆಶಾದ್ ಜಿಗಳೂರ ಉಪಸ್ಥಿತರಿದ್ದರು. ರಿಯಾಜ್‌ ಅಹ್ಮದ ಮುಲ್ಲಾ ಸ್ವಾಗತಿಸಿದರು. ವೈ.ಆರ್. ಬೆನಹಾಳ ಕಾರ್ಯಕ್ರಮ ನಿರೂಪಿಸಿದರು.