ಸಾರಾಂಶ
ಹೊಸಪೇಟೆ: ನಿಂತ ನೀರಿನ ತಾಣಗಳಲ್ಲಿ ಸೊಳ್ಳೆ ಸಾಂಧ್ರತೆ ಹೆಚ್ಚಾಗುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಳ ಸಾಧ್ಯತೆ ಇದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಅಗತ್ಯ ಎಂದು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯಿಂದ ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪತ್ರಕರ್ತರರಿಗೆ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಸರ್ಕಾರದ ಮಹತ್ತರ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಲು ಪತ್ರಕರ್ತರಿಂದ ಸಾಧ್ಯ. ವ್ಯಾಪಕವಾಗಿ ಹರಡುತ್ತಿರುವ ಡೆಂಘೀ ರೋಗದ ಜಾಗೃತಿ ಬಗ್ಗೆ ಪ್ರತಿ ಮನೆ, ಮನೆಗೂ ಮಾಹಿತಿ ತಲುಪಿಸುವ ಜವಾಬ್ದಾರಿ ನಿಮ್ಮಗಳ ಮೇಲಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು.
ಜನರಲ್ಲಿ ರೋಗಗಳ ನಿಯಂತ್ರಣ ಮಾಡುವ ಬಗ್ಗೆ ಅರಿವು ಮೂಡಿಸಲು ಅಗತ್ಯ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಬೇಕು. ಆಗ ಮಾತ್ರ ರೋಗಗಳು ಉಲ್ಬಣವಾಗುವುದನ್ನು ತಡೆಗಟ್ಟಲು ಸಾಧ್ಯ. ಪಟ್ಟಣ ಹಾಗೂ ಗ್ರಾಮಗಳಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮೈಗೊಳ್ಳಬೇಕು. ಸ್ವಚ್ಛತಾ ಕಾರ್ಯ ನಡೆಸಬೇಕು. ಮಾರಕ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪತ್ರಕರ್ತರ ಸಹಕಾರ ಅಗತ್ಯವಾಗಿದೆ ಎಂದರು.ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಬಿ. ಜಂಬಯ್ಯ ನಾಯಕ ಮಾತನಾಡಿ, ಸಮಾಜದ ಆರೋಗ್ಯಕ್ಕೆ ಸಾಂಕ್ರಾಮಿಕ ರೋಗಗಳ ಜಾಗೃತಿ ಅವಶ್ಯವಾಗಿದೆ. ಕೀಟಜನ್ಯ ರೋಗಗಳ ನಿಯಂತ್ರಣ ಸಮುದಾಯದ ಸಹಕಾರದಿಂದ ಮಾತ್ರ ಸಾಧ್ಯ. ಎಲ್ಲರೂ ಸೊಳ್ಳಗಳ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಲು ಜಾಗೃತಿ ಮೂಡಿಸಬೇಕು. ಜತೆಗೆ ಪ್ಲಾಸ್ಟಿಕ್ ತ್ಯಾಜ್ಯ, ಎಳನೀರು ಚಿಪ್ಪು, ಟೈಯರ್‌ಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗಿವೆ. 2025ರ ವೇಳೆಗೆ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಮಲೇರಿಯಾ ರೋಗದ ನಿವಾರಣಾ ಗುರಿಯನ್ನು ಸಾಧಿಸುವ ಉದ್ದೇಶದಿಂದ ಎಲ್ಲಾ ಹಂತಗಳಲ್ಲಿಯೂ ಪರಿಣಾಮಕಾರಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದ್ದು, ಕೆಲ ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣ ಕಂಡು ಬಂದಿಲ್ಲ. ಇನ್ನು ಉಳಿದ ರೋಗಳ ಜಾಗೃತಿಗೂ ಒತ್ತು ನೀಡಲಾಗಿದೆ ಎಂದರು.
ವೈದ್ಯಾಧಿಕಾರಿ ಬಸವರಾಜ, ರೋಗವಾಹಕ ಆಶ್ರಿತ ರೋಗಗಳ ಮಾಹಿತಿ ನೀಡಿದರು. 2002ರಲ್ಲಿ ಕಮಲಾಪುರದ ಲಕ್ಷ್ಮಿ ಬಾಯಿ ಹಾಗೂ 2006ರಲ್ಲಿ ಹುಲಿಗೆಮ್ಮ ಎಂಬ ಮಹಿಳೆಯರು ಗರ್ಭಿಣಿಯಿದ್ದಾಗ ಡೆಂಘೀ ಪ್ರಕರಣದಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಅವರಿಗೆ ಗೌರವಿಸಲಾಯಿತು.ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ.ರಾಧಿಕಾ, ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಜಗದೀಶ್ ಪಾಟ್ನೆ, ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ಟಿಎಚ್ ಒ ಡಾ. ಭಾಸ್ಕರ್, ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ, ಆರೋಗ್ಯ ನಿರೀಕ್ಷಕ ಧರ್ಮನಗೌಡ ಮತ್ತಿತರರಿದ್ದರು.