ಸಾರಾಂಶ
ರಾಗ, ತಾಳ, ಸಾಹಿತ್ಯ ಎಲ್ಲವೂ ಹಿಂದಿನ ಚಲನಚಿತ್ರಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಂಯೋಜನೆಗೊಂಡು ಐವತ್ತು ಅರವತ್ತು ವರ್ಷ ಕಳೆದರೂ ಹಿಂದಿನ ಹಳೆಯ ಚಲನಚಿತ್ರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ
ಗದಗ: ಒಂದು ಕಾಲದಲ್ಲಿ ಸಿನೆಮಾ ಗೀತೆಗಳು ಸಿನೆಮಾ ಸಂಭಾಷಣೆ ಮತ್ತು ಕಥಾ ವಸ್ತು ನೀತಿ ಬೋಧಕವಾಗಿದ್ದು, ಸಮಾಜಕ್ಕೆ ಉದಾತ್ತ ಸಂದೇಶ ಸಾರುವ ಸಾಧನವಾಗಿದ್ದವು ಆದರೆ ಇಂದಿನ ಬಹುತೇಕ ಸಿನೆಮಾ ಗೀತೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಇಂತ ಸಂದೇಶ ಮರೆಯಾಗಿ ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಸಾಹಿತ್ಯ ಸೃಷ್ಟಿಯಾಗುತ್ತಿರುವುದು ಶೋಚನೀಯ ಎಂದು ಸಾಹಿತಿ, ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಕಳವಳ ಹೇಳಿದರು.
ಅವರು ನಗರದ ಕಬ್ಬಿಗರಕೂಟ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಚಲನಚಿತ್ರಗೀತೆಗಳಲ್ಲಿ ಮೊಳಗಿದ ಕನ್ನಡ ಡಿಂಡಿಮದ ನಾದ ವಿಷಯವಾಗಿ ಉಪನ್ಯಾಸ ನೀಡಿದರು.ರಾಗ, ತಾಳ, ಸಾಹಿತ್ಯ ಎಲ್ಲವೂ ಹಿಂದಿನ ಚಲನಚಿತ್ರಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಂಯೋಜನೆಗೊಂಡು ಐವತ್ತು ಅರವತ್ತು ವರ್ಷ ಕಳೆದರೂ ಹಿಂದಿನ ಹಳೆಯ ಚಲನಚಿತ್ರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ ಎಂದರು.
ಅದರಲ್ಲೂ ನಾಡು ನುಡಿಯ ಅಭಿಮಾನ ಉದ್ದೀಪನಗೊಳಿಸುವ ಅನೇಕ ಚಿತ್ರಗೀತೆಗಳು ಸಾಹಿತ್ಯಕ ಮೌಲ್ಯಗಳಿಂದ ಕೂಡಿವೆ, ಇತ್ತೀಚೆಗೆ ಸಿನಿಮಾ ಗೀತೆಗಳಲ್ಲಿ ಅಗ್ಗದ ಪ್ರಚಾರದ ಸರಕು ತುಂಬಿಕೊಂಡಿದ್ದು ಅವುಗಳನ್ನು ಕೇಳಲು ಪ್ರಜ್ಞಾವಂತರು ಮುಜುಗರ ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಮಾತನಾಡಿ, ಕನ್ನಡ ಅಭಿಮಾನ ಕೇವಲ ನವೆಂಬರ ತಿಂಗಳಿಗೆ ಸೀಮಿತವಾಗಬಾರದು ಕನ್ನಡ ನಾಡು ನುಡಿಯ ಸಲುವಾಗಿ ಪ್ರತಿಯೊಬ್ಬರು ಸಮರ್ಪಣಾ ಭಾವದಿಂದ ದುಡಿಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಈ ವೇಳೆ ಕಥೆಗಾರ ಬಸವರಾಜ ಗಣಪ್ಪನವರ, ಆರ್.ಡಿ. ಕಪ್ಪಲಿ, ಮಲ್ಲಿಕಾರ್ಜುನ ಪೂಜಾರ, ಎಂ.ಬಿ. ಕೆಂಬಾವಿಮಠ, ಪ್ರ.ತೋ ನಾರಾಯಣಪೂರ, ರವಿ ಛಲವಾದಿ, ಪರಶು ಕಾಳೆ, ಎಚ್.ಕೆ. ರಂಗ್ರೇಜ, ಜಗನ್ನಾಥ ಟಿಕಣದಾರ, ಐ.ಟಿ.ಗದಗಿನ, ರಾಮಚಂದ್ರ ಗವಳಿ ಮೊದಲಾದವರು ಇದ್ದರು. ಬಿ.ಎಸ್. ಹಿಂಡಿ ಸ್ವಾಗತಿಸಿದರು. ನಜೀರ ಸಂಶಿ ವಂದಿಸಿದರು.